ಭಟ್ಕಳ : ಅರಣ್ಯ ಸಿಬ್ಬಂದಿಗಳಿಂದ ಕಾನೂನು ಬಾಹಿರವಾದ ದೌರ್ಜನ್ಯ,ಕಿರುಕುಳ ನಿಯಂತ್ರಿಸಿ,ಇಲ್ಲದಿದ್ದಲ್ಲಿ ಅರಣ್ಯ ಅತಿಕ್ರಮಣದಾರರ ಸಹನೆಯ ಕಟ್ಟೆ ಒಡೆದೀತು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಅಧ್ಯಕ್ಷ ರವೀಂದ್ರನಾಥ್ ನಾಯ್ಕ ಸರಕಾರಕ್ಕೆ ಎಚ್ಚರಿಸಿದ್ದಾರೆ.
ಅವರು ಇಂದು ಭಟ್ಕಳ ಉಪವಿಭಾಗಾಧಿಕಾರಿ ಅವರನ್ನು ಅರಣ್ಯವಾಸಿಗಳೊಂದಿಗೆ ಭೇಟಿಯಾದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ರಾಜ್ಯ ಉಚ್ಛ ನ್ಯಾಯಾಲಯ ಮತ್ತು ಮುಖ್ಯಮಂತ್ರಿಗಳ ನಿರ್ದೇಶನವನ್ನು ನಿರ್ಲಕ್ಷಿಸುವ ಅರಣ್ಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಲಿ.ನಮ್ಮ ಸಹನೆಯನ್ನು ಪರೀಕ್ಷೀಸುವುದು ಸೂಕ್ತವಲ್ಲ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರನಾಥ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದ ನಿಯೋಗವು ಇಂದು ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಅವರನ್ನು ಭೇಟಿಯಾಗಿ ಅರಣ್ಯ ಸಿಬ್ಬಂದಿಗಳಿಂದ ಉಂಟಾಗುತ್ತಿರುವ ಕಿರುಕುಳದ ಕುರಿತು ಚರ್ಚಿಸಿದರು.
ಅರಣ್ಯ ಹಕ್ಕು ಕಾಯಿದೆ ಉರ್ಜಿತವಿರುವಾಗ ಅರಣ್ಯ ಅತಿಕ್ರಮಣದಾರರ ಮೂಲಭೂತ ಮತ್ತು ಜೀವನಾವಶ್ಯಕ ಕಾರ್ಯಚಟುವಟಿಕೆಗೂ ಅರಣ್ಯ ಸಿಬ್ಬಂದಿಗಳು ಆತಂಕ ಮಾಡುತ್ತಿರುವುದು ಖಂಡನಾರ್ಹ.ಉಚ್ಛ ನ್ಯಾಯಾಲಯವೂ ಸಹಿತ ಅರಣ್ಯವಾಸಿಗಳಿಗೆ ಮಂಜೂರಿ ಪ್ರಕ್ರಿಯೆ ಸಂದರ್ಭದಲ್ಲಿ ಆತಂಕ, ಒಕ್ಕಲೆಬ್ಬಿಸುವ ಕ್ರಿಯೆ ಜರುಗಿಸಬಾರದೆಂಬ ನಿರ್ದೇಶನವನ್ನು ನೀಡಿದೆ. ಆದರೂ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವುದು ಖೇದಕರ ಎಂಬ ವಿಷಯ ಚರ್ಚೆ ಸಂದರ್ಭದಲ್ಲಿ ಪ್ರಸ್ತಾಪಿಸಲಾಯಿತು.