ಮುಂಡಗೋಡ : ಕೊರೊನಾ ವಾರಿಯರ್ಸ ಎಂದು ವೈದ್ಯರಿಗೆ ಮತ್ತು ನರ್ಸಗಳಿಗೆ ಹೇಳುತ್ತೇವೆ. ಆದರೆ ನಿಜವಾದ ಕೊರೊನಾ ವಾರಿಯರ್ಸ ಪೌರ ಕಾರ್ಮಿಕರು ಎಂದು ಕೆ.ಪಿ.ಸಿ.ಸಿ ಸದಸ್ಯ ಪ್ರಶಾಂತ ದೇಶಪಾಂಡೆ ಹೇಳಿದ್ದಾರೆ.
ಶುಕ್ರವಾರ ಅವರು ಪಟ್ಟಣ ಪಂಚಾಯತ ಆವರಣದಲ್ಲಿ ಪೌರ ಕಾರ್ಮಿಕರಿಗೆ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ವತಿಯಿಂದ ರೇಷನ ಕಿಟ್ ನೀಡಿ ಮಾತನಾಡುತ್ತಿದ್ದರು.
ಪೌರ ಕಾರ್ಮಿಕರು ಕಸ ವಿಲೇವಾರಿ ಮಾಡುವುದರ ಜೊತೆಗೆ ಸ್ಮಶಾನ ಸ್ವಚ್ಚ ಮಾಡುತ್ತಾರೆ. ಪೌರ ಕಾರ್ಮಿಕರು ಲಾಕ್ ಡೌನ ಸಂದರ್ಭದಲ್ಲಿ ತಮ್ಮ ಪರಿವಾರದ ಚಿಂತೆ ಬಿಟ್ಟು ಜನ ಸೇವೆ ಮಾಡುತ್ತಿದ್ದಾರೆ. ಇದು ಒಂದು ಪುಣ್ಯದ ಕೆಲಸ. ಅವರ ಸೇವೆಗೆ ಮೆಚ್ಚಿ ನಾವು ರೇಶನ್ ಕಿಟ್ ನೀಡುವುದರ ಮೂಲಕ ಒಂದು ಸಣ್ಣ ಗೌರವ ಸಲ್ಲಿಸುತ್ತಿದ್ದೇವೆ ಎಂದರು.
ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ ವತಿಯಿಂದ ವೈದ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಈಗಾಗಲೇ ಗೌರವಿಸಿ, ಸನ್ಮಾನಿಸಿದ್ದೇವೆ. ಅದರಂತೆ ಪೌರ ಕಾರ್ಮಿಕರಿಗೂ ಈ ದಿನ ರೇಷನ ಕಿಟ್ ನೀಡಿ ಗೌರವಿಸುತ್ತಿದ್ದೇವೆ ಎಂದರು.
ಮುಂಡಗೋಡ ಪಟ್ಟಣ 2008 ರಲ್ಲಿ ನಮ್ಮ ತಂದೆಯವರು ಶಾಸಕರಾಗಿದಾಗಿನಿಂದಲೂ ನೋಡುತ್ತಿದ್ದೇನೆ. ಈ ಪಟ್ಟಣ ಮತ್ತಷ್ಟು ಅಭಿವೃದ್ಧಿಗೊಳ್ಳಬೇಕಾಗಿದೆ. ಈಗಿರುವ ಪಟ್ಟಣ ಪಂಚಾಯತ ನಗರಸಭೆಯಾಗಿ ಪರಿವರ್ತಿಸಿದರೆ ಪಟ್ಟಣ ಮತ್ತಷ್ಟು ಅಭಿವೃದ್ಧಿಗೊಳ್ಳುತ್ತದೆ.
ವಿರೋಧ ಪಕ್ಷದ ಸಹಕಾರವು ಈ ಕೆಲಸಗಳಿಗೆ ಬೇಕಾಗುತ್ತದೆ. ಇದಕ್ಕೆ ನಮ್ಮ ಸಹಕಾರ ನೀಡುತ್ತೇವೆ. ಕಳೆದ 30 ವರ್ಷದಿಂದ ಮುಂಡಗೋಡ ಜನರ ಜೊತೆಯಲ್ಲಿ ನನಗೆ ಅವಿನಾಭಾವ ಸಂಬಂಧ ಇದೆ ಎಂದರು.
ತಾಲೂಕಾ ಬ್ಲಾಕ ಕಾಂಗರೆಸ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ಮಾತನಾಡಿ, ಪೌರ ಕಾರ್ಮಿಕರನ್ನು ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ನವರು ರೇಷನ ಕಿಟ್ ನೀಡಿ ಗೌರವಿಸಿರುವುದು ಶ್ಲಾಘನೀಯ. ಈಗಾಗಲೇ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಸರಕಾರಿ ಆಸ್ಪತ್ರೆಗಳಿಗೆ ಬೇಕಾಗುವ ಔಷಧ ಕಿಟ್ ನೀಡಿದ್ದಾರೆ. ಅದರಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೂ ಆರೋಗ್ಯ ಕಿಟ್ ನೀಡಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಗನಬಸಯ್ಯ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಅಶೋಕ ಶಿರ್ಸಿಕರ, ನಾಗರಾಜ್ ನಾರ್ವೇಕರ ,ದೀಪಕ ದೊಡ್ಡುರು, ಬಸವರಾಜ ದೋಡ್ಮನಿ ,ಅಲ್‍ಹಸನ ಬೆಂಡಿಗೇರಿ, ದೇಶಪಾಂಡೆ ರುಡಸೆಟಿಯ ಮಹಾಬಲೇಶ್ವರ ನಾಯ್ಕ, ಪಟ್ಟಣ ಪಂಚಾಯತ ಸದಸ್ಯರು ಆದ ಜಾಫರ ಹಂಡಿ, ರಜಾಖಾನ ಪಠಾಣ, ಗೌಸ ಮುಕಾನದಾರ, ಯುವ ಮುಖಂಡರಾದ ಜೈನು ಬೆಂಡಿಗೇರಿ, ಅಲ್ಲಾವುದ್ದೀನ ಕಮಡೊಳ್ಳಿ, ಮಲ್ಲಿಕಾರ್ಜುನ ಗೌಳಿ, ನಿತಿನ್ ರಾಯ್ಕರ ಸೇರಿದಂತೆ ಮುಂತಾದವರು ಇದ್ದರು.