ವನ್ನಳ್ಳಿ ಬಂದರನಲ್ಲಿ ದೋಣಿ ನಿಲ್ಲಿಸಲು ಮೀನುಗಾರರಿಗೆ ತೊಂದರೆ

Spread the love

ಕುಮಟಾ : ಕುಮಟಾ ಪಟ್ಟಣದ ವನ್ನಳ್ಳಿಯ ಬಂದರ್‌ನಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ತಡೆಗೋಡೆ ಕಾಮಗಾರಿ ಬಿರುಗಾಳಿ ರಭಸಕ್ಕೆ ಕುಸಿದು ಬಿದ್ದಿದ್ದರಿಂದ ಮೀನುಗಾರರಿಗೆ ದಕ್ಕೆಯಲ್ಲಿ ದೋಣಿ ನಿಲ್ಲಿಸಲು ತೊಂದರೆಯಾಗಿದೆ.

ಕುಮಟಾ ಪಟ್ಟಣದ ವನ್ನಳ್ಳಿಯ ಬಂದರ್‌ನಲ್ಲಿ ಎದುರಾಗುವ ಸಮುದ್ರಕೊರೆತ ಮತ್ತು ಅಲೆಯ ಆರ್ಭಟದಿಂದಾಗುವ ನಷ್ಟವನ್ನು ತಡೆಯಲು ಈ ಭಾಗದಲ್ಲಿ ಸಮುದ್ರಕ್ಕೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಲಾಗಿದೆ.

ಆದರೆ ಈ ತಡೆಗೋಡೆ ಕಾಮಗಾರಿ ವೈಜ್ಞಾನಿಕವಾಗಿದ್ದರಿಂದ ಕೆಲವೇ ವರ್ಷಗಳಲ್ಲಿ ತಡೆಗೋಡೆ ಕುಸಿದು,ಕಲ್ಲುಗಳೆಲ್ಲ ಸಮುದ್ರ ಪಾಲಾಗಿದೆ. ಇದರಿಂದ ದೋಣಿ ನಿಲ್ಲುವ ದಕ್ಕೆಯಲ್ಲೂ ಕಲ್ಲುಗಳು ಬಂದು ಬಿದ್ದಿದ್ದರಿಂದ ದೋಣಿ ನಿಲ್ಲಿಸಲಾಗದ ದುಃಸ್ಥಿತಿ ಎದುರಾಗಿದೆ. ಈ ವನ್ನಳ್ಳಿ ಭಾಗದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಮೀನುಗಾರರಿದ್ದು,ಎರಡು ನೂರಕ್ಕೂ ಅಧಿಕ ಮೀನುಗಾರಿಕಾ ದೋಣಿಗಳಿವೆ.ಈ ದೋಣಿಗಳು ಲಂಗರು ಹಾಕುವ ಪ್ರದೇಶದಲ್ಲಿಯೇ ತಡೆಗೋಡೆಗಳ ಕಲ್ಲುಗಳು ಬಿದ್ದಿದ್ದರಿಂದ ದೋಣಿ ನಿಲ್ಲಿಸಲು ಅಡ್ಡಿಯಾಗಿದೆ. ಒಂದು ವೇಳೆ ಅದೇ ಸ್ಥಳದಲ್ಲಿ ದೋಣಿ ನಿಲ್ಲಿಸಿದರೆ ಅಲೆಗಳ ಅಬ್ಬರಕ್ಕೆ ದೋಣಿಗಳು ಕಲ್ಲುಗಳಿಗೆ ಬಡಿದುಕೊಂಡು ಹಾನಿಯಾಗುವ ಸಾಧ್ಯತೆ ಅಧಿಕವಾಗಿದೆ.ಇದರಿಂದ ದೋಣಿಗಳು ದಕ್ಕೆಗೆ ಬಾರದೇ ಮೀನುಗಾರರು ದೋಣಿಗಳನ್ನು ತಳ್ಳಿಕೊಂಡು ಹೋಗಿ ದಡಕ್ಕೆ ನಿಲ್ಲಿಸುವ ಕಷ್ಟದ ಸ್ಥಿತಿ ಎದುರಾಗಿದೆ. ಹಾಗಾಗಿ ದಕ್ಕೆಯಲ್ಲಿ ಸೇರಿಕೊಂಡಿರುವ ತಡೆಗೋಡೆಯ ಕಲ್ಲುಗಳನ್ನು ತೆರವುಗೊಳಿಸಿ, ಮೀನುಗಾರಿಕಾ ದೋಣಿಗಳು ಸಲೀಸಾಗಿ ಲಂಗರು ಹಾಕುವಂತೆ ವ್ಯವಸ್ಥೆ ಮಾಡಬೇಕು ಮತ್ತು ಈ ಭಾಗದಲ್ಲಿ ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸುವ ಕಾರ್ಯವಾಗಬೇಕೆಂದು ಈ ಭಾಗದ ಮೀನುಗಾರರು ಸಂಬಂಧಪಟ್ಟ ಇಲಾಖೆಯನ್ನು ಒತ್ತಾಯಿಸಿದ್ದಾರೆ.