ಯಲ್ಲಾಪುರ : ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಇಂದು ಪಟ್ಟಣದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಲೋಕೋಪಯೋಗಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
ನೆರೆಯಿಂದ ಜಿಲ್ಲೆಯಾದ್ಯಂತ ಉಂಟಾಗಿರುವ ಹಾನಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಸಚಿವರಾದ ಶಿವರಾಮ ಹೆಬ್ಬಾರ್ ಅವರು ನಿನ್ನೆ ಲೋಕೋಪಯೋಗಿ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರೊಂದಿಗೆ ದೂರವಾಣಿ ಮೂಲಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಗಳ ಬಗ್ಗೆ ತಿಳಿಸಿ ತುರ್ತಾಗಿ ರಾಜ್ಯ ಮಟ್ಟದ ತಂಡವನ್ನು ಜಿಲ್ಲೆಗೆ ಕಳುಹಿಸುವಂತೆ ವಿನಂತಿಸಿದ್ದರು.
ಇಂದು ರಾಜ್ಯ ಲೋಕೋಪಯೋಗಿ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಸಚಿವರು ಅರಬೈಲ್, ಗುಳ್ಳಾಪುರ ,ಕಳಚೆ ಹಾಗೂ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಗೊಳಗಾದ ರಸ್ತೆ ಹಾಗೂ ಸೇತುವೆ ನಿರ್ಮಾಣ ಮಾಡುವ ಕುರಿತು ರೂಪರೇಷೆಗಳನ್ನು ಸಿದ್ದಪಡಿಸಿ ರಸ್ತೆ ನಿರ್ಮಾಣ ಮಾಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಶೀಘ್ರವಾಗಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಮತ್ತು ರಾಷ್ಟ್ರೀಯ ಹೆದ್ದಾರಿ ಕಾರ್ಯದರ್ಶಿ ಕೃಷ್ಣ ರೆಡ್ಡಿ, ಲೋಕೋಪಯೋಗಿ ಮುಖ್ಯ ಇಂಜಿನಿಯರ್ ಎಸ್.ಎಫ್.ಪಾಟೀಲ್, ರಾಷ್ಟ್ರೀಯ ಹೆದ್ದಾರಿ ಮುಖ್ಯ ಇಂಜಿನಿಯರ್ ಗೋವಿಂದರಾಜು, ಶಿರಸಿ ವಿಭಾಗದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣ ರೆಡ್ಡಿ ಹಾಗೂ ಕಾರವಾರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ದೇವಿದಾಸ್ ಚೌಹಾನ್ ಹಾಗೂ ಸಹಾಯ ಅಭಿಯಂತರರು ಹಾಗೂ ಅಧಿಕಾರಿಗಳು, ತಹಶೀಲ್ದಾರ್ ಕೃಷ್ಣ ಕಾಮ್ಕರ್ ಪ್ರಮುಖರಾದ ವಿಜಯ ಮಿರಾಶಿ, ಗಣಪತಿ ಮುದ್ದೇಪಾಲ್ , ಪೋಲಿಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.