ಫೋನ್ ಟ್ಯಾಪ್ ಮಾಡಲು ಕುಮಾರಸ್ವಾಮಿ, ರೇವಣ್ಣ ಭಯೋತ್ಪಾದಕರೇ: ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಶ್ನೆ

Spread the love

ಬೆಂಗಳೂರು : ಫೋನ್ ಟ್ಯಾಪ್ ಮಾಡಲು ಕುಮಾರಸ್ವಾಮಿ, ರೇವಣ್ಣ ಅವರೇನು ಭಯೋತ್ಪದಕರೇ? ಫೋನ್ ಟ್ಯಾಪ್ ನಂತಹ ಮುಠ್ಠಾಳತನದ ಕೆಲಸವನ್ನು ನಮ್ಮ ಸರ್ಕಾರ ಮಾಡುವುದಿಲ್ಲ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.

ಫೋನ್ ಟ್ಯಾಪ್ ಬಗ್ಗೆ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಮಾಧ್ಯಮದವರು ಕುಮಾರಪಾರ್ಕ್ ಸರಕಾರಿ ಅತಿಥಿ ಗೃಹದ ಬಳಿ ಗಮನ ಸೆಳೆದಾಗ ಅವರು ಸೋಮವಾರ ಉತ್ತರಿಸಿದ್ದಿಷ್ಟು:
ಭಯೋತ್ಪಾದಕರ ಫೋನನ್ನು ಅನುಮತಿ ಪಡೆದು ಟ್ಯಾಪ್ ಮಾಡಲಾಗುತ್ತದೆ. ಇವರು ನಮ್ಮ ರಾಜ್ಯದ ನಾಯಕರು, ಇವರ ಫೋನ್ ಟ್ಯಾಪ್ ಮಾಡುವ ಅವಶ್ಯಕತೆ ನಮ್ಮ ಸರ್ಕಾರಕ್ಕಿಲ್ಲ. ಕೇವಲ ಪ್ರಚಾರಕ್ಕಾಗಿ ಇಂತಹ ಸುಳ್ಳು ಆರೋಪ ಮಾಡುತ್ತಿದ್ದಾರೆ.”
ಸರ್ಕಾರ ಒಂದು ವರ್ಷ ಐಸಿಯುನಲ್ಲಿ ಇತ್ತು ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ “ಪಾಪ ಅವರು ಇನ್ನೇನು ಮಾಡಲು, ಇನ್ನೇನು ಹೇಳಲು ಸಾಧ್ಯ. ಅಧಿಕಾರದಲ್ಲಿ ಇದ್ದಾಗ ಏನೂ ಮಾಡಲಿಲ್ಲ. ಸರ್ಕಾರ ಐಸಿಯುನಲ್ಲಿ ಇತ್ತೋ ಇರಲಿಲ್ಲವೋ ಎಂದು ಜನ ಹೇಳಬೇಕು, ನಾಯಕರುಗಳಲ್ಲ”.
ಈ ಹಿಂದಿನ ಸರ್ಕಾರದ ಕೆಟ್ಟ ಆಡಳಿತದಿಂದ, ಬೆಲೆ ಏರಿಕೆಯಿಂದ ತತ್ತರಿಸಿದ್ದ ಮಹಿಳೆಯರ ಜೀವನದಲ್ಲಿ ನಮ್ಮ ಸರ್ಕಾರದ ಆಡಳಿತದಿಂದ ಬದಲಾವಣೆ ಉಂಟಾಗಿದೆ. ಕೆಟ್ಟ ಆಡಳಿತ ಎಂದು ಚುನಾವಣೆಗೆ ಮುಂಚಿತವಾಗಿ ಕುಮಾರಸ್ವಾಮಿ ಹಾಗೂ ಅವರ ಪಕ್ಷದವರ ನುಡಿಮುತ್ತುಗಳ ಬಗ್ಗೆ ಮಾಧ್ಯಮದವರ ಬಳಿಯೇ ದಾಖಲೆಗಳು ಇದ್ದಾವಲ್ಲವೇ? ಅವರು ನಮ್ಮ ಬಗ್ಗೆ ಮಾತನಾಡಲೇ ಬೇಕಲ್ಲವೇ!. ಅವರಿಂದ ನಾನು ಶಹಬಾಷ್ಗಿರಿ ನಿರೀಕ್ಷಿಸಲು ಸಾಧ್ಯವೇ? ಇದನ್ನು ನಾನು ನಿರೀಕ್ಷೆ ಮಾಡುವುದೂ ಇಲ್ಲ”.
ನನಗೂ ಪೆನ್ ಡ್ರೈವ್ ಗೂ ಸಂಬಂಧವಿಲ್ಲ
ಪೆನ್ ಡ್ರೈವ್ ಪ್ರಕರಣದಲ್ಲಿ ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಅವರ ಪಾತ್ರದ ಬಗ್ಗೆ ಆರೋಪ ಮಾಡಿರುವ ಕುರಿತು ಕೇಳಿದಾಗ “ನನಗೂ ಈ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ನನ್ನ ಹೆಸರನ್ನು ಪ್ರಸ್ತಾಪ ಮಾಡದಿದ್ದರೆ ಅವರಿಗೆಲ್ಲ ನಿದ್ದೆ ಬರುವುದಿಲ್ಲ. ಮಾಧ್ಯಮಗಳು ಸಹ ಈ ವಿಚಾರದಲ್ಲಿ ನೈತಿಕತೆಯ ಗಡಿ ಮೀರಬಾರದು. ಉಪ್ಪು ತಿಂದವನು ನೀರು ಕುಡಿಯಬೇಕು ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ” ಎಂದರು.