ಬಜೆಟ್ 2024 : ಬಡವರು, ಮಹಿಳೆಯರು, ರೈತರು ಸೇರಿ 9 ಆದ್ಯತೆ ಕ್ಷೇತ್ರ ಘೋಷಣೆ…..

Spread the love

ನವದೆಹಲಿ : ಭಾರೀ ನಿರೀಕ್ಷೆಯ ಮೋದಿ ಸರ್ಕಾರ 3.0 ಅವಧಿಯ ಮೊದಲ ಬಜೆಟ್ ಮಂಡನೆಯಾಗುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 7ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿದ್ದಾರೆ.
ಬಜೆಟ್ ಭಾಷಣದ ಆರಂಭದಲ್ಲೇ 2024-25ರ ಆಯವ್ಯಯ ದಾಖಲೆ ಪತ್ರದಲ್ಲಿ ಆದ್ಯತೆ ನೀಡಿದ ಕ್ಷೇತ್ರಗಳನ್ನು ಘೋಷಿಸಲಾಗಿದೆ. 

ಈ ಪೈಕಿ ಯುವ, ಅನ್ನದಾತ, ಬಡವ ಹಾಗೂ ಮಹಿಳೆ ಸೇರಿದಂತೆ ಈ 9 ಕ್ಷೇತ್ರಗಳಿಗೆ ಪ್ರಮುಖವಾಗಿ ಆದ್ಯತೆ ನೀಡಲಾಗಿದೆ. ಇದೇ ವೇಳೆ ಕೌಶಲ್ಯ, ಮಧ್ಯಮವರ್ಗ, ನಿರುದ್ಯೋಗ, ಎಮ್ ಎಸ್ ಎಮ್ ಇ ಕ್ಷೇತ್ರಗಳಿಗೂ ಒತ್ತು ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸರ್ಕಾರ ಬಡವರು, ಮಹಿಳೆ, ಯುವ ಮತ್ತು ಅನ್ನದಾತನ ಮೇಲೆ ಕೇಂದ್ರೀಕರಿಸಬೇಕಾಗಿದ್ದು, ಅನ್ನದಾತರಿಗೆ ಒಂದು ತಿಂಗಳ ಹಿಂದೆ ಎಲ್ಲಾ ಪ್ರಮುಖ ಬೆಳೆಗಳಿಗೆ ಹೆಚ್ಚಿನ ಬೆಂಬಲ ಬೆಲೆ ಘೋಷಿಸಿದ್ದೆವು. ನಮ್ಮ ಈ ಭರವಸೆಯನ್ನು ಈಡೇರಿಸುತ್ತೇವೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಐದು ವರ್ಷಗಳವರೆಗೆ ವಿಸ್ತರಿಸಲಾಗಿದ್ದು, ಹೆಚ್ಚು ಲಾಭದಾಯಕವಾಗಿದೆ. ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಲಾದ ವಿವಿಧ ಯೋಜನೆಗಳ ಅನುಮೋದನೆ ಮತ್ತು ಅನುಷ್ಠಾನಕ್ಕಾಗಿ 80 ಕೋಟಿಗೂ ಹೆಚ್ಚು ಜನರ ಆಡಳಿತಾತ್ಮಕ ಕ್ರಮಗಳು ನಡೆಯುತ್ತಿವೆ ಎಂದು ತಿಳಿಸಿದರು.
ಕೃಷಿ ಹಾಗೂ ಕೃಷಿ ಸಂಬಂದಿತ ಕ್ಷೇತ್ರಗಳಿಗೆ ಬರೋಬ್ಬರಿ 1.52 ಲಕ್ಷ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ತರಕಾರಿ ಬೆಳೆಗಳಿಗೆ ಉತ್ತೇಜನ ನೀಡಲು ವಿಶೇಷ ಯೋಜನೆ ರೂಪಿಸಲಾಗಿದೆ. ರೈತರಾಗಾಗಿ ಕಿಸಾನ್ ಕ್ರೆಡಿಟ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಶಿಕ್ಷಣ, ಉದ್ಯೋಗ ಹಾಗೂ ಕೌಶಲ್ಯಾಭಿವೃದ್ದಿಗೆ 1.42 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ,
ಉದ್ಯೋಗ ಸೃಷ್ಟಿಗಾಗಿ ಮೂರು ಕೌಶಲ್ಯ ಯೋಜನೆ ಜಾರಿ ಮಾಡಲಾಗಿದೆ. ನಗರ ಅಭಿವೃದ್ಧಿ, ಇಂಧನ ಸೌಕರ್ಯ ಸೇರಿದಂತೆ ಮೂಲಭೂತ ಸೌಕರ್ಯಗಳಿಗೂ ಪ್ರತ್ಯೇಕ ಗಮನ ನೀಡಲಾಗಿದೆ. ಅಮೃತಸರ- ಕೊಲ್ಕತ್ತಾ ಕೈಗಾರಿಕಾ ಕಾರಿಡಾರ್ ಸೇರಿದಂತೆ ಹಲವು ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಲಾಗಿದೆ. ಅಮೃತಸರ-ಗಯಾ ಎಕಾನಮಿಕ್ ಕಾರಿಡಾರ್ ಅಭಿವೃದ್ಧಿ ಯೋಜನೆಗೆ ಮಾಡಲಾಗುವುದು ಎಂದರು.
ಇದೇ ವೇಳೆ ಎನ್‌ಡಿಎ ಸರ್ಕಾರ ರಚನೆಗೆ ಬೆಂಬಲ ನೀಡಿದ ಬಿಹಾರದ ನಿತೀಶ್ ಕುಮಾರ್ ಹಾಗೂ ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡುಗೆ ಪ್ರತಿಯಾಗಿ ಬಂಪರ್ ಕೊಡುಗೆ ನೀಡಲಾಗಿದೆ. ಕೋಟಿ ಕೋಟಿ ರೂಪಾಯಿ ಅನುದಾನವನ್ನು ಬಿಹಾರ ಹಾಗೂ ಆಂಧ್ರ ಪ್ರದೇಶಕ್ಕೆ ಘೋಷಿಸಲಾಗಿದೆ.
ಮೂಲಭೂತ ಸೌಕರ್ಯಗಳ ಪೈಕಿ ಎಕ್ಸ್‌ಪ್ರೆಸ್ ವೇಗೆ ಹೆಚ್ಚಿನ ಒತ್ತು ನೀಡಲಾಗಿದೆ. ಉತ್ಪಾದನಾ ವಲಯದಲ್ಲಿ ಕ್ರೆಡಿಟ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಹಳ್ಳಿಗಳ ಅಭಿವೃದ್ಧಿಗೆ ವಿಶೇಷ ಯೋಜನೆ ಘೋಷಿಸಲಾಗಿದೆ. ಗ್ರಾಮೀಣ ಅಭಿವೃದ್ಧಿಗೆ 2.66 ಲಕ್ಷ ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಇತ್ತ ಮುದ್ರಾ ಸಾಲವನ್ನು 10 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.