ಬೆಂಗಳೂರು: ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು, ಸರ್ಕಾರಿ ಪಾಲಿಟೆಕ್ನಿಕ್ ಗಳು, ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ ಅರೆಕಾಲಿಕ ಉಪನ್ಯಾಸಕರುಗಳಿಗೆ ಗೌರವಧನ ಹೆಚ್ಚಿಸಿ ಆದೇಶಿಸಿದೆ.
ಈ ಕುರಿತಂತೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಅದರಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುವ ಸರ್ಕಾರಿ ಮತ್ತು ಅನುದಾನಿತ ಇಂಜಿನಿಯರಿಂಗ್ ಕಾಲೇಜು ಹಾಗೂ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ಗಳ ಅರೆಕಾಲಿಕ ಉಪನ್ಯಾಸಕರುಗಳಿಗೆ ಮಾಸಿಕ ಸಂಭಾವನೆಯನ್ನು ಕ್ರಮವಾಗಿ ರೂ.7,500/- ಹಾಗೂ ರೂ.10,000/-ಗಳನ್ನು ನಿಗದಿಪಡಿಸಲಾಗಿದೆ ಎಂದಿದೆ.
ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರ ಮಾಸಿಕ ಗೌರವ ಧನವನ್ನು ರೂ.7,500/- ರಿಂದ 12,500/- ಕ್ಕೆ ಹಾಗೂ ಸರ್ಕಾರಿ ಮತ್ತು ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರುಗಳ ಮಾಸಿಕ ಗೌರವ ಧನವನ್ನು ರೂ.10,000/- ಗಳಿಂದ 15,000/- ಕ್ಕೆ ಹೆಚ್ಚಿಸಿ ಆದೇಶಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಅರೆಕಾಲಿಕ ಉಪನ್ಯಾಸಕರುಗಳಿಗೆ ಗರಿಷ್ಠ ಮಾಸಿಕ ಕಾರ್ಯಭಾರ 32 ಗಂಟೆಗೆ, ಗರಿಷ್ಠ ಕಾರ್ಯಭಾರಕ್ಕೆ ಮಾಸಿಕ ಭತ್ಯೆ ರೂ.15000/- ಗಳನ್ನು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿನ ಅರೆಕಾಲಿಕ ಉಪನ್ಯಾಸಕರುಗಳಿಗೆ ಗರಿಷ್ಠ ಮಾಸಿಕ ಕಾರ್ಯಭಾರ 36 ಗಂಟೆಗೆ ಗರಿಷ್ಠ ಕಾರ್ಯಭಾರಕ್ಕೆ ಮಾಸಿಕ ಭತ್ಯೆ ರೂ.12500/-ಗಳನ್ನು ನಿಗದಿಪಡಿಸಲಾಗಿರುತ್ತದೆ.