Headlines

ಪತ್ರಕರ್ತರ ವಿರುದ್ಧ ಪೊಲೀಸ್ ಅಧಿಕಾರಿಯ ವರ್ತನೆ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ

Spread the love

ಮುಂಡಗೋಡ : ದಾಂಡೇಲಿಯ ಪೊಲೀಸ್ ವೃತ್ತ ನಿರೀಕ್ಷಕರಾದ ಭೀಮಣ್ಣ ಎಂ. ಸೂರಿ ಅವರು ಪತ್ರಕರ್ತರ ಜೊತೆ ದರ್ಪದಿಂದ ಹಾಗೂ ಅನುಚಿತವಾಗಿ ನಡೆದುಕೊಂಡಿರುವುದನ್ನು ಖಂಡಿಸಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ಇಲ್ಲಿನ ಉಪತಹಶೀಲ್ದಾರ್ ಜಿ.ಬಿ.ಭಟ್ಟ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.

ದಾಂಡೇಲಿ ನಗರದ ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯರ ವಿರುದ್ಧ ಅದೇ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ದಾಂಡೇಲಿಯ ಪೊಲೀಸ್ ವೃತ್ತ ನಿರೀಕ್ಷಕರಾದ ಭೀಮಣ್ಣ ಎಂ. ಸೂರಿ ಅವರು ಪತ್ರಕರ್ತರ ಜೊತೆ ದರ್ಪದಿಂದ ಹಾಗೂ ಅನುಚಿತವಾಗಿ ನಡೆದುಕೊಂಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಮುಂಡಗೋಡ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಒತ್ತಾಯಿಸುತ್ತದೆ.
ಸಮಾಜದಲ್ಲಿ ಪತ್ರಕರ್ತರೂ ಕೂಡಾ ಗೌರವದ ಸ್ಥಾನದಲ್ಲಿಯೇ ಇದ್ದವರು. ದಿನದ 24 ಗಂಟೆಗಳ ಕಾಲ ಜಾಗೃತರಾಗಿದ್ದು ಸುದ್ದಿ ನೀಡುವವರು. ಅವರೂ ಸಹ ಸುದ್ದಿ ಮಾಡುವಾಗ ಕರ್ತವ್ಯ ನಿರತರೇ ಆಗಿರುತ್ತಾರೆ. ಪತ್ರಕರ್ತರಿಗೂ ಕೂಡಾ ಬರೆಯಲು ಹಾಗೂ ಮಾತನಾಡಲು, ಅನ್ಯಾಯ ವಿರೋಧಿಸಲು ಸಂವಿಧಾನ ಬದ್ಧ ಹಕ್ಕಿದೆ. ಹೀಗಿರುವಾಗ ಜವಾಬ್ದಾರಿ ಸ್ಥಾನದಲ್ಲಿದ್ದ ಸಿ.ಪಿ.ಐ. ಭೀಮಣ್ಣ.ಎಂ.ಸೂರಿ ಅವರು ಅಧಿಕಾರದ ದರ್ಪ ತೋರಿಸಿ, ಪತ್ರಕರ್ತರನ್ನು ಎಳೆದಾಡಿ, ಏರು ಧ್ವನಿಯಲ್ಲಿ ಬೈದಾಡಿರುವುದು ಬೇಸರ ತಂದಿದೆ. ಈ ಘಟನೆಯ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ನೀಡಿ, ಮಾತುಕತೆ ನಡೆಸಿ ಅಥವಾ ಕಾನೂನು ರೀತಿಯಲ್ಲಿ ಸಮಸ್ಯೆ ಪರಿಹರಿಸಬೇಕಿದ್ದ ಪೊಲೀಸ್ ಅಧಿಕಾರಿಯೇ ಕಾನೂನು ಸುವ್ಯವಸ್ಥೆ ಹದಗೆಡುವಂತಹ ವಾತಾವರಣಕ್ಕೆ ಎಡೆಮಾಡಿಕೊಟ್ಟಿರುವುದು ಖಂಡನೀಯವಾಗಿದೆ. ಮುಂಡಗೋಡ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಈ ವಿಚಾರವನ್ನು ತೀವ್ರವಾಗಿ ಖಂಡಿಸುತ್ತದೆ.
ಈ ಘಟನೆಯ ಕುರಿತಂತೆ ಪತ್ರಕರ್ತರನ್ನು ಎಳೆದಾಡಿ ದರ್ಪ ತೋರಿಸಿದ ಸಿ.ಪಿ.ಐ. ಭೀಮಣ್ಣ.ಎಂ.ಸೂರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ವರದಿ ಮಾಡಲು ತೆರಳುವ ಸಂವಿಧಾನದ ನಾಲ್ಕನೆಯ ಅಂಗವೆಂದೇ ಹೇಳಲಾಗುವ ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಶಾಂತೇಶ ಬೆನಕನಕೊಪ್ಪ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಪಾಟೀಲ, ಕಾರ್ಯದರ್ಶಿ ಸಂತೋಷ ರಾಯ್ಕರ, ಉಪಾಧ್ಯಕ್ಷ ಮುನೇಶ ತಳವಾರ, ಸದಸ್ಯರಾದ ನಜೀರುದ್ದೀನ ತಾಡಪತ್ರಿ, ಸಚಿನ ನಾಯ್ಕ, ಬಸವರಾಜ ಲಮಾಣಿ, ಅವಿನಾಶ ಕೋರಿ, ರಾಜಶೇಖರ ನಾಯ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.