Headlines

ಗಣೇಶೋತ್ಸವಕ್ಕೆ ಕ್ಷಣಗಣನೆ…..! ಸಣ್ಣ ಮೂರ್ತಿಗೇ ಹೆಚ್ಚಿನ ಬೇಡಿಕೆ…!!

Spread the love

ಮುಂಡಗೋಡ : ಮನೆ ಮನೆಯಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲು ಹಾಗೂ ಸಾರ್ವಜನಿಕ ಗಣೇಶೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. 

ಈ ನಡುವೆ ತಾಲೂಕಿನಾದ್ಯಂತ ಗಣಪತಿಯನ್ನು ಸ್ವಾಗತಿಸಲು ಸಿದ್ಧತೆ ನಡೆದಿದೆ.
ನೈಸರ್ಗಿಕ ಬಣ್ಣ ಲೇಪನದೊಂದಿಗೆ ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಗಳ ಖರೀದಿಗೆ ಜನ ಮುಂದಾಗುತ್ತಿದ್ದಾರೆ. ಮೂರ್ತಿ ತಯಾರಕರು ಅರ್ಧ ಅಡಿಯಿಂದ ಹಿಡಿದು 3-4 ಅಡಿ ಎತ್ತರದವರೆಗಿನ ಪರಿಸರ ಸ್ನೇಹ ಗಣೇಶ ಮೂರ್ತಿ ಸಿದ್ಧಪಡಿಸಿದ್ದಾರೆ. ಒಂದೊಂದು ಮೂರ್ತಿಯು ವಿಭಿನ್ನ ಶೈಲಿ ಬಣ್ಣ ಭಂಗಿಯೊಂದಿಗೆ ನೋಡುಗರನ್ನು ಆಕರ್ಷಿಸುತ್ತಿದೆ. 

ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿಗಳು ಮಾರಾಟಕ್ಕೆ ಬಂದಿದೆ. ಗ್ರಾಹಕರು ಗಣಪತಿ ಮೂರ್ತಿ ಖರೀದಿಗಾಗಿ ಹಾಗೂ ಗಣೇಶ ಮೂರ್ತಿಯನ್ನು ಈಗಾಗಲೇ ಬುಕ್ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಆಗಮಿಸುತ್ತಿದ್ದಾರೆ. ಮುಂಡಗೋಡ ನಗರ ಸೇರಿದಂತೆ ತಾಲೂಕಿನಾದ್ಯಂತ ಹೆಚ್ಚಿನ ಮನೆಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಹಲವೆಡೆ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.
ಪ್ರತಿವರ್ಷದಂತೆ ಈ ವರ್ಷವೂ ನಗರ ಹಾಗೂ ಗ್ರಾಮೀಣ ಭಾಗಗಳಿಗೆ ಶಿಗ್ಗಾಂವ, ಕುನ್ನೂರ, ಶಿರಸಿ, ಕಲಘಟಗಿ, ಸವಣೂರ, ಬಂಕಾಪುರ, ಕುಂದಗೋಳ ಸೇರಿದಂತೆ ಮುಂತಾದ ಕಡೆಯಿಂದ ಗಣಪತಿ ಮೂರ್ತಿ ಮಾರಾಟಕ್ಕೆ ಬಂದಿದೆ. 

ಸಣ್ಣ ಗಣಪತಿಗೆ ಬೇಡಿಕೆ…..
ಈ ಹಿಂದೆ ದೊಡ್ಡ ಮತ್ತು ಎತ್ತರದ ಗಣಪತಿ ಮೂರ್ತಿಯನ್ನು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸುತ್ತಿದ್ದರು. ಆದರೆ ಈ ವರ್ಷ ಗಣಪತಿ ಮೂರ್ತಿ ಬೆಲೆ ಹೆಚ್ಚಾಗಿರುವುದರಿಂದ ದೊಡ್ಡ ಗಣಪತಿಗಳಿಗೆ ಬೇಡಿಕೆ ಕಡಿಮೆಯಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಣ್ಣ ಗಣೇಶ ಮೂರ್ತಿಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಗಣೇಶ ಮೂರ್ತಿ ಮಾರಾಟಗಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಪಿಒಪಿ ಮೂರ್ತಿಗಳ ನಿಷೇಧ ಏಕೆ..?
ಕೆಲವರು ಎತ್ತರದ ಗಣೇಶನಿಗೆ ಪಿಒಪಿ ಮೂರ್ತಿಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಈ ಮೂರ್ತಿಗಳನ್ನು ರಾಸಾಯನಿಕ ವಸ್ತುಗಳಿಂದ ತಯಾರಿಸುವುದಲ್ಲದೇ ಇವುಗಳನ್ನು ಕೆರೆ, ಬಾವಿ ಸೇರಿ ಇತರ ಜಲ ಮೂಲಗಳಲ್ಲಿ ವಿಸರ್ಜಿಸಿದರೆ ಕರಗುವುದಿಲ್ಲ. ಜೊತೆಗೆ ನೀರು ಹಾಳಾಗುವುದಲ್ಲದೇ ಪರಿಸರವೂ ನಾಶವಾಗುತ್ತದೆ.