ಪುತ್ರನಿಗೆ ಸಿಗದ ಸಚಿವ ಸ್ಥಾನ, ಬಿಎಸ್‍ವೈ ತಂತ್ರ ವಿಫಲ

Spread the love

ಬೆಂಗಳೂರು : ಮುಖ್ಯಮಂತ್ರಿ ಆಯ್ಕೆ ಯಲ್ಲಿ ಮೇಲುಗೈ ಸಾಧಿಸಿದ್ದ ಯಡಿಯೂರಪ್ಪ ಅವರು ಸಂಪುಟ ರಚನೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ತಮ್ಮ ಪುತ್ರ ಹಾಗೂ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಲು ಕೊನೆ ಕ್ಷಣದವರೆಗೂ ನಡೆಸಿದ ಪ್ರಯತ್ನ ಫಲಕೊಟ್ಟಿಲ್ಲ. ಇದು ರಾಜಕೀಯವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹಿನ್ನಡೆಯೆಂದೇ ವ್ಯಾಖ್ಯಾನಿಸಲಾಗಿದೆ.

ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅಚ್ಚರಿ ಅಭ್ಯರ್ಥಿಯಾಗಿ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದ ಯಡಿಯೂರಪ್ಪ, ಈ ಬಾರಿ ತಮ್ಮ ಪುತ್ರನನ್ನು ಸಂಪುಟಕ್ಕೆ ಸೇರಿಸಲು ನಡೆಸಿದ ಪ್ರಯತ್ನಗಳು ಫಲ ನೀಡಲಿಲ್ಲ. ಮಧ್ಯಾಹ್ನ 12 ಗಂಟೆವರೆಗೂ ವಿಜಯೇಂದ್ರ ನನ್ನು ಸಂಪುಟಕ್ಕೆ ಸೇರಿಸಿಕೊಳ್ಳು ವಂತೆ ರಾಜ್ಯ ಉಸ್ತುವಾರಿ ಅರುಣ್‍ಸಿಂಗ್ ಮೂಲಕ ದೆಹಲಿ ನಾಯಕರಿಗೆ ಭಾರೀ ಲಾಬಿ ನಡೆಸಿದರು.

ವಿಜಯೇಂದ್ರ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದು, ಅವರಿಗೆ ಸೂಕ್ತ ಸ್ಥಾನಮಾನ ನೀಡಲೇಬೇಕು, ಸಚಿವ ಸ್ಥಾನ ನೀಡುವುದರಿಂದ ಪಕ್ಷ ಸಂಘಟನೆಗೆ ಸಹಕಾರಿಯಾಗಲಿದೆ ಎಂಬ ಕಾರಣವನ್ನು ವರಿಷ್ಠರ ಮುಂದೆ ಇಟ್ಟಿದ್ದರು. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹೈಕಮಾಂಡ್ ಕುಟುಂಬ ರಾಜಕಾರಣವನ್ನು ವಿರೋಧಿಸುವ ನಾವೇ ನಿಮ್ಮ ಪುತ್ರನಿಗೆ ಸಂಪುಟದಲ್ಲಿ ಸ್ಥಾನ ನೀಡುವುದಾದರೂ ಹೇಗೆ?

ಈಗಾಗಲೇ ಒಬ್ಬ ಪುತ್ರ ಸಂಸದನಾ ಗಿದ್ದಾನೆ. ಮತ್ತೊಬ್ಬ ಪುತ್ರನನ್ನು ಸಚಿವರನ್ನಾಗಿ ಮಾಡುವು ದಾದರೆ ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷಗಳ ಕುಟುಂಬ ರಾಜಕಾರಣವನ್ನು ಪ್ರಶ್ನಿಸಲು ಸಾಧ್ಯವೇ ಎಂದಿದ್ದಾರೆ. ಇನ್ನೊಂದು ಮೂಲದ ಪ್ರಕಾರ ವಿಜಯೇಂದ್ರನಿಗೆ ಸಂಪುಟದಲ್ಲಿ ಸ್ಥಾನಮಾನ ನೀಡಿದರೆ ಅದು ಮತ್ತೊಂದು ಶಕ್ತಿ ಕೇಂದ್ರ (ಪವರ್ ಸೆಂಟರ್ ) ಆಗಲಿದೆ. ಇದರಿಂದ ಬೊಮ್ಮಾಯಿ ಅವರು ಮುಕ್ತವಾಗಿ ಆಡಳಿತ ನಡೆಸಲು ಸಾಧ್ಯವಾ ಗುವುದಿಲ್ಲ. ಹೀಗಾಗಿ ವಿಜಯೇಂದ್ರನಿಗೆ ಸಂಪುಟ ದಲ್ಲಿ ಸ್ಥಾನಮಾನ ನೀಡಲೇಬಾರದು ಎಂದು ರಾಜ್ಯವನ್ನು ಪ್ರತಿನಿಧಿಸುವ ದೆಹಲಿ ನಾಯಕರು ಅಡ್ಡಿಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಎಲ್ಲವನ್ನು ಪರಿಗಣಿಸಿಯೇ ವರಿಷ್ಠರು ವಿಜಯೇಂದ್ರನಿಗೆ ಕೊನೆಕ್ಷಣದಲ್ಲಿ ಸಚಿವ ಸ್ಥಾನ ನೀಡಲು ನಿರಾಕರಿಸಿದ್ದಾರೆ.