ಕಾರವಾರ : ಶಿರೂರು ಗುಡ್ಡ ಕುಸಿತದ ಬಳಿಕ ಮೊದಲಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕಾಣೆಯಾಗಿರುವ ಜಗನ್ನಾಥ ಪುತ್ರಿ ಕೃತಿಕಾ ಅವರಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಭರವಸೆಯಂತೆ ಇದೀಗ, ಹೆಚ್ಡಿ ಕುಮಾರಸ್ವಾಮಿ ಅವರು ಜಗನ್ನಾಥ ಪುತ್ರಿ ಕೃತಿಕಾ ಅವರಿಗೆ ಕೈಗಾ ಅಣು ವಿದ್ಯುತ್ ಸ್ಥಾವರದ (Kaiga Atomic Power Station) ಬಿಹೆಚ್ಇಎಲ್ನಲ್ಲಿ ಉದ್ಯೋಗ ಕೊಡಿಸಿದ್ದಾರೆ. ಹೆಚ್ಡಿ ಕುಮಾರಸ್ವಾಮಿ ಅವರು ಕೃತಿಕಾ ಅವರಿಗೆ ದೂರವಾಣಿ ಕರೆ ಮಾಡಿ ಉದ್ಯೋಗ ಖಾತರಿಪಡಿಸಿದ್ದಾರೆ.
ಜಗನ್ನಾಥ ಅವರ ಇನ್ನೋರ್ವ ಪುತ್ರಿ ಪಲ್ಲವಿ ನಾಯ್ಕ ಅವರಿಗೆ ಕಳೆದವಾರ ಪ್ರವಾಸೋದ್ಯಮ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ರಾಜ್ಯ ಸರ್ಕಾರ ನೌಕರಿ ನೀಡಿತ್ತು.
ಇದೇ ವರ್ಷ ಜುಲೈ 16 ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಗುಡ್ಡ ಕುಸಿತದಲ್ಲಿ 11 ಮಂದಿ ಕಾಣೆಯಾಗಿದ್ದು, ಎಂಟು ಜನರ ಶವ ಪತ್ತೆಯಾಗಿತ್ತು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದ ಕುಮಾರಸ್ವಾಮಿ
ಶಿರೂರು ಗುಡ್ಡ ಕುಸಿತದ ಬಳಿಕ ಸ್ಥಳಕ್ಕೆ ಭೇಡಿ ನೀಡಿ ಪರಿಶೀಲನೆ ನಡೆಸಿದ್ದ ಹೆಚ್ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದರು. 2018 ರಲ್ಲಿ ನಾನು ಸಿಎಂ ಆಗಿದ್ದಾಗ ಕೊಡಗಿನಲ್ಲಿ ಭೂ ಕುಸಿತ ಆಗಿತ್ತು. ಆಗ ಮನೆ ಕಳೆದುಕೊಂಡವರಿಗೆ ಹತ್ತು ಲಕ್ಷ ಹಣ ಕೊಟ್ಟಿದ್ದೆ. ಆದರೆ, ಇಂತಹ ಘಟನೆಯಲ್ಲಿ ರಾಜ್ಯ ಸರ್ಕಾರ ರಾಜಕಾರಣ ಮಾಡುವುದು ತರವಲ್ಲ ಎಂದು ವಾಗ್ದಾಳಿ ಮಾಡಿದ್ದರು.