ಚಿಕ್ಕೋಡಿ : ದೂರು ಕೊಡಲು ಪೊಲೀಸ್ ಠಾಣೆಗೆ ಬಂದ ದಲಿತ ಯುವತಿಯೊಬ್ಬಳಿಗೆ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಪ್ರಶಾಂತ್ ಮುನ್ನೋಳಿ ಮತ್ತು ಪೊಲೀಸ್ ಪೇದೆ ಸದಾಶಿವ ಪಾಟೀಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಅಥಣಿ ಪಟ್ಟಣದ ಆಸ್ಪತ್ರೆಯೊಂದರ ವೈದ್ಯರಾಗಿರುವ ಸಾಗರ ಭಾವಿ ಅದೇ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಕಳೆದ ಆರು ತಿಂಗಳಿಂದ ನಿರಂತರ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಕೊನೆಗೆ ಮದುವೆಯಾಗುವುದಿಲ್ಲವೆಂದು ಹೇಳಿದ್ದಾನೆ ಎಂದು ಆರೋಪಿಸಿ ಯುವತಿಯು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ದೂರು ನೀಡಿದ ಬಳಿಕ ಆರೋಪಿ ಜೀವ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಡಿವೈಎಸ್‌ಪಿ ಕಚೇರಿಗೆ ಹೋದಾಗ ಪ್ರಶಾಂತ್ ಮುನ್ನೋಳ್ಳಿ ಮತ್ತು ಪೊಲೀಸ್ ಪೇದೆ ಸದಾಶಿವ ಪಾಟೀಲ್ ಜಾತಿ ನಿಂದನೆ ಮಾಡಿ ಯುವತಿಯನ್ನು ಠಾಣೆಯಿಂದ ಹೊರಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನೊಂದ ಯುವತಿಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಕುರಿತು ವಿವರಿಸಿದಾಗ ಡಿವೈಎಸ್‌ಪಿ ಮತ್ತು ಪೊಲೀಸ್ ಪೇದೆ ಮೇಲೆ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಅಥಣಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನಮ್ಮ ಹಿರಿಯರು
ಅನುಭವದ ಮೂಸೆಯಲ್ಲಿ ಕರಗಿ
ಪರಿಶುದ್ದ ಹೊನ್ನ ಗಣಿಯಾದವರು
ತಮ್ಮ ಜೀವನಾನುಭವದ ದಾರೆ ಎರೆದು
ನಮ್ಮನ್ನು ಹೊನ್ನಾಗಿಸಿದವರು
ಅನುಭವದ ಭಂಡಾರದಲ್ಲಿ
ಜ್ಞಾನವನ್ನು ಬಗೆದು ತೆಗೆದು
ಸದಾ ನಮ್ಮ ಏಳಿಗೆಯನ್ನು ಬಯಸುವವರು
ಇವರೇ ನಮ್ಮ ಹಿರಿಯರು
ಕಿರಿಯರ ನಿಷ್ಕಾಳಜಿ ಕಂಡು
ಮನ ನೊಂದರೂ ಶಾಪ ಹಾಕದೆ
ಕಣ್ಣಂಚಿನ ನೀರನ್ನು ಕಾಣದಂತೆ ಒರೆಸಿ
ಮನದುಂಬಿ ಹಾರೈಕೆ ನೀಡುವವರು
ತಮ್ಮ ಜೀವಮಾನದ ಶ್ರಮದ ಫಲವನ್ನು
ಪ್ರೀತಿಯಿಂದ ಕೈಯೆತ್ತಿ ನೀಡಿದವರು
ಹಸಿರೆಲೆಯ ಚಿಗುರುವಿಕೆಗೆ
ಹಣ್ಣೆಲೆಯಾಗಿ ಉದುರಿದವರು
ಬದುಕಿನ ಒಳಿತು ಕೆಡುಕುಗಳ
ಕಂಡು ಉಂಡು ಅರಿತವರು
ತಮ್ಮ ಅನುಭವದ ಜ್ಯೋತಿಯ ಬೆಳಕಿನಲ್ಲಿ
ನಮ್ಮನ್ನು ಸರಿದಾರಿಯಲ್ಲಿ ಮುನ್ನಡೆಸಿದವರು
✒ ನಾಗರಾಜ ಸಣ್ಣಪ್ಪ ಅರ್ಕಸಾಲಿ
(ಶಾರದಾತನಯ)
ಗೌರವ ಕೋಶಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ.