ಕೆಂದಲಗೇರಿ ರಸ್ತೆ, ಬ್ರಿಜ್ ಕುಸಿತ : ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳು….!

Spread the love

ಮುಂಡಗೋಡ : ತಾಲೂಕಿನ ಕೆಂದಲಗೇರಿ ಗ್ರಾಮದ ಮುಖ್ಯ ರಸ್ತೆ ಮಳೆಗೆ ಸಣ್ಣ ಬ್ರಿಜ್ ಜಖಂಗೊಂಡು ಬೈಕ್ ಹೊರತು ಪಡಿಸಿ ಬಸ್, ಕಾರು, ಟ್ರಕ್ ಮತ್ತಿತ್ತರ ವಾಹನಗಳು ಸಂಚರಿಸುತ್ತಿಲ್ಲ..! 

ಬಸ್ ಸಂಚರಿಸದ ಹಿನ್ನೆಲೆಯಲ್ಲಿ ಸುಮಾರು 30 ಶಾಲಾ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಕೆಂದಲಗೇರಿ ಗ್ರಾಮಸ್ಥರು ದೂರಿದ್ದಾರೆ.
ತಾಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 8ನೇ ತರಗತಿಯವರೆಗೆ ಇರುವುದರಿಂದ ಕೆಂದಲಗೇರಿ ಹಾಗೂ ಯರೆಬೈಲ್ ಗ್ರಾಮದ ವಿದ್ಯಾರ್ಥಿಗಳು ಉಗ್ಗಿನಕೇರಿ ಗ್ರಾಮದ ಶಾಲೆಗೆ ಹೋಗುತ್ತಾರೆ. ಮುಂಡಗೋಡ ಹಾಗೂ ಯಲ್ಲಾಪುರಗೆ ಹೋಗುವ ಬಸ್ ಗಳು ಬಸನಾಳ ಕ್ರಾಸ್ ದಿಂದ ಕೆಂದಲಗೇರಿ ಹಾಗೂ ಯರೆಬೈಲ್ ಗೆ ಹೋಗುತ್ತವೆ. ಆದರೆ ಕೆಂದಲಗೇರಿ ಗ್ರಾಮದ ಪ್ರಾರಂಭದ ರಸ್ತೆಯಲ್ಲಿಯಲ್ಲಿಯೇ ರಸ್ತೆ ಬ್ರಿಜ್ ಕುಸಿದಿರುವುದರಿಂದ ಉಗ್ಗಿನಕೇರಿಯಿಂದ ಮುಂಡಗೋಡಕ್ಕೆ ಬೈಕ್ ಸಂಚಾರ ಹೊರತು ಪಡಿಸಿ ಯಾವುದೇ ವಾಹನ ಸೇರಿದಂತೆ ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಕೆಂದಲಗೇರಿಯ ರಸ್ತೆ ಬ್ರಿಜ್ ಹಾಗೂ ರಸ್ತೆ ಕುಸಿದು ಸರಿಯಾಗಿ ಒಂದು ತಿಂಗಳು ಗತಿಸಿದೆ. ಆದರೆ
ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕುರಿತು ಕಿಂಚಿತ್ತು ಕ್ರಮಕೈಗೊಳ್ಳಲು ಮುಂದಾಗುತ್ತಿಲ್ಲಾ. ಮಕ್ಕಳ ಶಿಕ್ಷಣಕ್ಕಾದರು ರಸ್ತೆ ಸರಿಪಡಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾವು ಪ್ರತಿಭಟನೆ ಶೀಘ್ರದಲ್ಲಿ ಹಮ್ಮಿಕೊಳ್ಳುತ್ತೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.