ಕೊರೊನ ಹಗರಣ : ಅಗತ್ಯವೆ ಇಲ್ಲದ ಯಂತ್ರೋಪಕರಣ ಖರೀದಿಯಲ್ಲಿ 15 ಕೋಟಿಗೂ ಅಧಿಕ ಅಕ್ರಮ : ನ್ಯಾ.ಕುನ್ಹಾ ವರದಿ

Spread the love

ಬೆಂಗಳೂರು : ಕೊರೋನಾ ಸಮಯದಲ್ಲಿ ಅಗತ್ಯವೇ ಇಲ್ಲದೆ ಇರುವ ಸಂದರ್ಭದಲ್ಲಿ ಸುಮಾರು 84.99 ಕೋಟಿ ವೆಚ್ಚದಲ್ಲಿ ಸಿಟಿ ಸ್ಕ್ಯಾನ್ ಯಂತ್ರೋಪಕರಣಗಳನ್ನು ಖರೀದಿಸಿದ್ದು ಅದರಲ್ಲಿ 15.83 ಕೋಟಿ ರೂಪಾಯಿಗಳ ಅಕ್ರಮ ನಡೆದಿದೆ ಎಂದು ನ್ಯಾ.ಕುನ್ಹಾ ಆಯೋಗದ ವರದಿಯಲ್ಲಿನ ಸ್ಪೋಟಕ ಮಾಹಿತಿ ಲಭ್ಯವಾಗಿದೆ.

ಕೊರೋನಾ ವೈರಾಣು ಪತ್ತೆಗೆ ಯಾವ ರೀತಿಯಲ್ಲೂ ನೆರವಿಗೆ ಬರದ 17 ಸಿ.ಟಿ ಸ್ಕ್ಯಾನ್ ಯಂತ್ರಗಳನ್ನು, ಕೋವಿಡ್ ನಿರ್ವಹಣೆಗಾಗಿ ಬಿಡುಗಡೆ ಮಾಡಿದ ಅನುದಾನದಲ್ಲೇ ಖರೀದಿಸಲಾಗಿದೆ. ಇದರಿಂದ ಕೋವಿಡ್ ನಿಯಂತ್ರಣಕ್ಕೆ ಯಾವ ಪ್ರಯೋಜನವೂ ಆಗಿಲ್ಲ ಎಂದು ವರದಿ ಹೇಳಿದೆ.128 ಸ್ಟೈಸ್ ಸಾಮರ್ಥ್ಯದ ಸಿ.ಟಿ ಸ್ಕ್ಯಾನ್ ಯಂತ್ರಗಳ ಖರೀದಿಗೆ ಸಂಬಂಧಿಸಿದಂತೆ ಪಿಲಿಪ್ಸ್ ಇಂಡಿಯಾ 128 ಸ್ಟೈಸ್ ಸಾಮರ್ಥ್ಯದ ಯಂತ್ರಕ್ಕೆ ದರ ನಮೂದಿಸಿ, ಫೋರ್ಸಸ್ ಹೆಲ್ತ್ಕೇರ್ 160 ಸ್ಟೈಸ್ ಸಾಮರ್ಥ್ಯದ ಯಂತ್ರಕ್ಕೆ ದರ ನಮೂದಿಸಿ ಬಿಡ್ ಸಲ್ಲಿಸಿದ್ದವು.

2020-2022ರ ನಡುವೆ ವಿವಿಧ ಜಿಲ್ಲಾಸ್ಪತ್ರೆಗಳಿಗೆಂದು 128 ಸ್ಟೈಸ್ ಸಾಮರ್ಥ್ಯದ 11 ಸಿ.ಟಿ ಸ್ಕ್ಯಾನ್ ಯಂತ್ರಗಳನ್ನು ಖರೀದಿಸಲಾಗಿದೆ. ಸೇವ್ ಮೆಡಿಟೆಕ್ ಸಿಸ್ಟಮ್ಸ್ ಎಂಬ ಕಂಪನಿಯು 2020ರ ಆಗಸ್ಟ್‌ನಲ್ಲಿ ಒಂದು ಯಂತ್ರವನ್ನು 4.92 ಕೋಟಿ ರೂಪಾಯಿ ದರದಲ್ಲಿ ಪೂರೈಕೆ ಮಾಡಿದೆ. ಇದೇ ಕಂಪನಿ 2021ರ ಜೂನ್‌ನಲ್ಲಿ ಎರಡು ಯಂತ್ರಗಳನ್ನು ಅದೇ ದರದಲ್ಲಿ ಪೂರೈಸಿದೆ ಎಂಬ ಮಾಹಿತಿ ವರದಿಯಲ್ಲಿದೆ.

2021ರ ಅಕ್ಟೋಬರ್‌ನ 10ರಂದು ಫೋರ್ಸಸ್‌ ಹೆಲ್ತ್‌ಕೇರ್‌ ಕಂಪನಿಯು 2 ಯಂತ್ರಗಳನ್ನು ತಲಾ 6.10 ಕೋಟಿ ರೂಪಾಯಿ ದರದಲ್ಲಿ ಪೂರೈಕೆಗೆ ಒಪ್ಪಿಕೊಂಡಿದೆ. ಮತ್ತು ಅದೇ ಅಕ್ಟೋಬ‌ರ್ 12ರಂದು ಇನ್ನೂ ಆರು ಯಂತ್ರಗಳನ್ನು ತಲಾ 5.95 ಕೋಟಿ ರೂಪಾಯಿ ದರದಲ್ಲಿ ಪೂರೈಸಲು ಸಹಿ ಮಾಡಿದೆ. 4.92 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಬೇಕು ಎಂಬ ನಿಬಂಧನೆ ಇದ್ದರೂ, ಹೆಚ್ಚಿನ ದರಕ್ಕೆ ಖರೀದಿಸಿದ ಕಾರಣಕ್ಕೆ 8.55 ರೂಪಾಯಿ ಕೋಟಿ ನಷ್ಟವಾಗಿದೆ ಎಂದು ವರದಿ ವಿವರಿಸಿದೆ.

ಜಿಇಎಂ ಪೋರ್ಟಲ್‌ನಲ್ಲಿ ಈ ಯಂತ್ರಕ್ಕೆ 4.92 ಕೋಟಿ ರೂಪಾಯಿ ಎಂದು ನಮೂದಾಗಿದೆ. ನಿಯಮಗಳ ಪ್ರಕಾರ ಸರ್ಕಾರಿ ಸಂಸ್ಥೆಗಳು ಈ ಯಂತ್ರಗಳನ್ನು ಅದೇ ದರದಲ್ಲಿ ಖರೀದಿಸಬೇಕು. ಸೇವ್ ಮೆಡಿಟೆಕ್‌ನಿಂದ ಮೂರು ಯಂತ್ರಗಳನ್ನು ಅದೇ ದರದಲ್ಲಿ ಖರೀದಿಸಿದ್ದರೂ, ಕೆಲವೇ ತಿಂಗಳ ಅಂತರದಲ್ಲಿ ಒಂದು ಕೋಟಿಗೂ ಹೆಚ್ಚು ದರ ನೀಡಿ ಏಳು ಯಂತ್ರಗಳನ್ನು ಖರೀದಿಸಲಾಗಿದೆ. ಇಲ್ಲಿ ಅಕ್ರಮ ನಡೆದಿದೆ ಎಂದು ವರದಿ ಹೇಳಿದೆ.

ಅಲ್ಲದೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಶ್ರೀರಾಮುಲು ಕಾರ್ಯವೈಖರಿಗೆ ಸಮಿತಿಯು ಆಕ್ಷೇಪ ವ್ಯಕ್ತಪಡಿಸಿದೆ.
ಕೊರೊನ ವೇಳೆ ಖಾಸಗಿ ಲ್ಯಾಬ್ ಗಳಿಗೆ 6.93 ಕೋಟಿ ಹಣ ಸಂದಾಯವಾಗಿದೆ. ಆದರೆ ಖಾಸಗಿ ಲ್ಯಾಬ್ ಗಳು ICMR ನಿಂದ ಮಾನ್ಯತೆ ಪಡೆದಿಲ್ಲ. ಅಧಿಕೃತ ICMR ಲ್ಯಾಬ್ ಗಳು ಅಲ್ಲ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. RTPCR ಟೆಸ್ಟಿಗೆ ಲ್ಯಾಬ್ ಗಳ ಸಾಮರ್ಥ್ಯ ಕ್ಷಮತೆ ಗುರುತಿಸಿಲ್ಲ.

ಸಾಮರ್ಥ್ಯ ಹಾಗೂ ಕ್ಷಮತೆ ಪರಿಶೀಲಿಸದೆ ಖಾಸಗಿ ಲ್ಯಾಬ್ ಗೆ ಅನುಮತಿ ನೀಡಲಾಗಿದೆ. 6 ಲ್ಯಾಬ್ ಗಳಿಗೆ ಒಪ್ಪಂದವಿಲ್ಲದೆ ಹಣ ಸಂದಾಯ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅನಧಿಕೃತವಾಗಿ ಲ್ಯಾಬ್ ಗಳಿಗೆ ಹಣ ಸಂದಾಯದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. 8 ಲ್ಯಾಬ್ ಗಳಿಗೆ ಅನುಮತಿ ಪಡೆಯದೆ 4.28 ಕೋಟಿ ರೂಪಾಯಿ ಸಂದಾಯವಾಗಿದೆ. ಮಾನ್ಯತೆ ಪಡೆದ ಲ್ಯಾಬ್ಗಳಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಲ್ಯಾಬ್ ಎಂದು ಗುರುತಿಸಿಲ್ಲ.