ಶಬರಿಮಲೆ : ಕೇರಳದ ಶೀಕ್ಷೇತ್ರ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಬರುವ ಮಕ್ಕಳ ಸಂಖ್ಯೆಯಲ್ಲಿ ಪ್ರಸಕ್ತ ವರ್ಷದ ಋುತುವಿನಲ್ಲಿ ಭಾರಿ ಏರಿಕೆಯಾಗಿದೆ.
ಮಕ್ಕಳ ಸುರಕ್ಷತೆಗೆ ಕ್ರಮ
18 ನೇ ಮೆಟ್ಟಿಲು ಹತ್ತುವಾಗ ಗುಂಪಿನಿಂದ ತಪ್ಪಿ ಬರುವ ಮಕ್ಕಳನ್ನು ಸುರಕ್ಷಿತವಾಗಿ ಎತ್ತಿಕೊಂಡು ಮುಂದಿನ ಸಾಲಿನಲ್ಲಿ ದರ್ಶನಕ್ಕೆ ಅನುವು ಮಾಡಿಕೊಟ್ಟು ಪೋಷಕರೊಂದಿಗೆ ಕರೆತರುವುದು ಹಾಗೂ ರಸ್ತೆಯಲ್ಲಿ ಬಾಕಿಯಾದ ಮಕ್ಕಳನ್ನು ಪೊಲೀಸರು ಪತ್ತೆ ಹಚ್ಚಿ ಹೆತ್ತವರಿಗೆ ನೀಡುವುದು ನಿತ್ಯದ ದೃಶ್ಯವಾಗಿದೆ.
ಕ್ರಿಸ್‌ಮಸ್ ರಜೆಗಾಗಿ ಶಾಲೆಗಳು ಮುಚ್ಚಿರುವುದರಿಂದ ಇದೀಗ ಅನೇಕ ಮಕ್ಕಳು ಅಯ್ಯಪ್ಪ ವ್ರತಧಾರಿಗಳು ಮತ್ತು ಚಿಕ್ಕ ಮಾಲಿಗಪುರಂಗಳು ಸನ್ನಿಧಾನಕ್ಕೆ ಬರುತ್ತಿದ್ದಾರೆ. ಮಕ್ಕಳಿಗೆ ಹಾಗೂ ಹಿರಿಯ ವ್ಯಕ್ತಿಗಳಿಗಾಗಿ ಪ್ರತ್ಯೇಕ ಸರದಿ ಸಾಲನ್ನು ವ್ಯವಸ್ಥೆ ಮಾಡಲಾಗಿದೆ. ಕರ್ತವ್ಯದಲ್ಲಿರುವ ಪೊಲೀಸರು ಮತ್ತು ಅಧಿಕಾರಿಗಳು ಮತ್ತು ದೇವಸ್ವಂ ಮಂಡಳಿ ಸಿಬ್ಬಂದಿ ಮಕ್ಕಳೊಂದಿಗೆ ಬಂದವರಿಗೆ ಸಹಾಯ ಮಾಡುತ್ತಿದ್ದಾರೆ.
5 ದಿನದಲ್ಲಿ ಇಪ್ಪತ್ತಾರು ಸಾವಿರ ಮಕ್ಕಳು ದರ್ಶನ
ಡಿಸೆಂಬರ್ 18 ರಿಂದ 22 ರ ವರೆಗಿನ ಐದು ದಿನಗಳಲ್ಲಿಇಪ್ಪತ್ತಾರು ಸಾವಿರಕ್ಕೂ ಹೆಚ್ಚು ಮಕ್ಕಳು ಸನ್ನಿಧಾನಕ್ಕೆ ದರ್ಶನಕ್ಕೆ ಆಗಮಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದಿನಗಳಲ್ಲಿ, ಹೆಚ್ಚಿನ ಸಂಖ್ಯೆಯ ಮಕ್ಕಳು ಡಿಸೆಂಬರ್ 19 ರಂದು ಆಗಮಿಸಿದ್ದಾರೆ. ಆ ದಿನ 7138 ಮಕ್ಕಳು ದರ್ಶನ ಪಡೆದಿದ್ದಾರೆ. ಡಿಸೆಂಬರ್ 20 ರಂದು 6618 ಮಕ್ಕಳು ಮತ್ತು 18 ರಂದು 5337 ಮಕ್ಕಳು ಆಗಮಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಡಿಸೆಂಬರ್ 21 ಮತ್ತು 22 ರಂದು 3985 ಮತ್ತು 3665 ಮಕ್ಕಳು ಆಗಮಿಸಿದ್ದಾರೆ. ರಜಾ ದಿನವಾದ್ದರಿಂದ ವಾಹನ ದಟ್ಟಣೆ ಹೆಚ್ಚಾದಾಗ ಮಕ್ಕಳ ದಂಡೇ ಹರಿದು ಬರುತ್ತಿದೆ.
ರಿಸ್ಟ್ ಬ್ಯಾಂಡ್ ಧರಿಸುವವರ ಸಂಖ್ಯೆ ಹೆಚ್ಚಳ
ಮಕ್ಕಳ ಕೈಗೆ ಹಾಕುವ ರಿಸ್ಟ್ ಬ್ಯಾಂಡ್ ಈ ಬಾರಿ ಏರಿಕೆಯಾಗಿದೆ. ಈ ವರ್ಷ ಡಿಸೆಂಬರ್ 21ರ ವರೆಗೆ 2,24,768 ಮಂದಿ ರಿಸ್ಟ್ ಬ್ಯಾಂಡ್ ಧರಿಸಿ ಸನ್ನಿಧಾನಕ್ಕೆ ಆಗಮಿಸಿದ್ದಾರೆ. ಕಳೆದ ವರ್ಷ ಈ ಸಮಯದಲ್ಲಿ 1,70,042 ಮಂದಿ ರಿಸ್ಟ್ ಬ್ಯಾಂಡ್ ಧರಿಸಿದ್ದರು. ವಯಸ್ಸಾದ ಮಹಿಳೆಯರನ್ನು ದಾರಿತಪ್ಪಿಸದಂತೆ ರಿಸ್ಟ್‌ಬ್ಯಾಂಡ್‌ಗಳನ್ನು ಸಹ ನೀಡಲಾಗುತ್ತದೆ.