ಹಿಂದುಳಿದ ವರ್ಗಗಳ ಪಟ್ಟಿ ರಚನೆ : ಸಚಿವ ಈಶ್ವರಪ್ಪ ಹರ್ಷ

Spread the love

ಬೆಂಗಳೂರು : ‘ಹಿಂದುಳಿದ ವರ್ಗಗಳ ಪಟ್ಟಿ ರಚನೆ ಅಧಿಕಾರವನ್ನು ಆಯಾಯ ರಾಜ್ಯಗಳಿಗೆ ನೀಡಿದ ಕೇಂದ್ರ ಸರ್ಕಾರದ ತೀರ್ಮಾನವನ್ನು ಸ್ವಾಗತಿಸುತ್ತೇನೆ‌’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ವಿಧಾನ ಸೌಧದಲ್ಲಿ ಸುದ್ದಿಗಾರರ ಜತೆಗೆ ಮಂಗಳವಾರ ಮಾತನಾಡಿದ ಅವರು, ‘ಹಿಂದುಳಿದ ವರ್ಗಕ್ಕೆ ಬಿಜೆಪಿ ಸಾಕಷ್ಟು ಅವಕಾಶ ನೀಡಿದೆ. ಸಮುದಾಯಕ್ಕೆ ಅತಿ ಹೆಚ್ಚಿನ ಸಚಿವ ಸ್ಥಾನಗಳನ್ನು ನೀಡಿದೆ’ ಎಂದರು.

‘ವೈದ್ಯಕೀಯ ಸೀಟುಗಳಲ್ಲಿ ಶೇ 27ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆಯಂಥವರು ಯಾವುದೇ ರಾಜಕೀಯ ಮಾಡದೇ ಸ್ವಾಗತ ಮಾಡಿದ್ದಾರೆ.‌ ಕಾಂಗ್ರೆಸ್ ಕೇವಲ ಮಾತಿನಲ್ಲಿ ಹೇಳುತ್ತಿದ್ದರು. ಆದರೆ ಬಿಜೆಪಿ ಅದನ್ನು ಮಾಡಿ ತೋರಿಸಿದೆ’ ಎಂದರು.

‘ಮನೆಯಲ್ಲಿ ಮಕ್ಕಳು ಬೇಸರ ಆಗುವುದು ಸ್ವಾಭಾವಿಕ. ಆಗ ಅಪ್ಪ ಅಮ್ಮ ಸುಧಾರಿಸುತ್ತಾರೆ. ನಮ್ಮ ಪಾರ್ಟಿ ಹೇಳೋರು ಕೇಳೋರು ಇರುವ ಪಕ್ಷ. ಹಲವರು ತ್ಯಾಗ ಮಾಡಿ ಪಕ್ಷಕ್ಕೆ ಬಂದಿದ್ದಾರೆ, 105 ಶಾಸಕರ ತ್ಯಾಗದಿಂದ ನಾವು ಸಚಿವರಾಗಿದ್ದೇವೆ ಎಂಬ ಮುನಿರತ್ನ ಅವರ ದೊಡ್ಡಮಾತು ನಾನು ಮೆಚ್ಚುತ್ತೇನೆ. ಅನೇಕ ವರ್ಷಗಳಿಂದ ಅನೇಕ ಹಿರಿಯರು ತ್ಯಾಗ ಮಾಡಿದ್ದಾರೆ. 105 ಸ್ಥಾನಗಳನ್ನು ಗೆಲ್ಲಲು ಎಲ್ಲರೂ ಪ್ರಯತ್ನ ಮಾಡಿದ್ದಾರೆ’ ಎಂದರು.

‘ಈ ಸಮಾಜದಲ್ಲಿ ಕೆಲ ಖಾತೆ ಪ್ರಭಾವಿ, ಕೆಲವು ಖಾತೆ ಪ್ರಭಾವಿ ಅಲ್ಲ ಎನ್ನುವ ಭಾವನೆ ಬಂದುಬಿಟ್ಟಿದೆ. ಅಲ್ಲೊಬ್ಬರು ಇಲ್ಲೊಬ್ಬರು ಬೇಸರ ಆಗುವುದು ಸಹಜ, ಅದು ಸರಿಯಾಗಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.