ಸೂರ್ಯನ ಸುತ್ತ ಕಾಣಿಸಿಕೊಂಡ ವರ್ಣದ ಉಂಗುರ….!

Spread the love

ಮುಂಡಗೋಡ : ನೀಲ ಆಕಾಶದಲ್ಲಿ ಜಗಮಗಿಸುವ ಸೂರ್ಯನ ಸುತ್ತ ಉಂಟಾದ ತೇಜೋಮಂಡಲ (ಪರಿಧಿ) ದೃಶ್ಯ ನೋಡಿದ ಮುಂಡಗೋಡ ನಗರದ ಜನರು ಆಶ್ಚರ್ಯಚಕಿತರಾದರು.

ಮಂಗಳವಾರ ಮಧ್ಯಾಹ್ನ 12.30ರಿಂದ 1.40ರವರೆಗೆ ಸೂರ್ಯನ ಸುತ್ತ ಮೂಡಿದ್ದ ವರ್ಣದುಂಗುರ ನೋಡಲು ಜನರು ಮುಗಿಬಿದ್ದರು. ಯುವಕ-ಯುವತಿಯರು ಮೊಬೈಲ್‌ಗಳಲ್ಲಿ ಈ ದೃಶ್ಯವನ್ನು ಸೆರೆ ಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ಇದೇನು ಅಪಾಯದ ಮುನ್ಸೂಚನೆಯಾ? ಎಂದು ಕೆಲವು ಜನರು ಆತಂಕವನ್ನೂ ವ್ಯಕ್ತಪಡಿಸಿದರು.

ಸೂರ್ಯನ ಬೆಳಕು ಮತ್ತು ವಾಯುಮಂಡಲದಲ್ಲಿ ತೇಲಾಡುತ್ತಿರುವ ಹಿಮ ಸ್ಫಟಿಕಗಳು ಪರಸ್ಪರ ಪ್ರಭಾವ ಬೀರುವುದರಿಂದ ಸೃಷ್ಟಿಯಾಗುವ ದ್ಯುತಿ ವಿದ್ಯಮಾನಗಳ ವರ್ಗದ ಹೆಸರೇ ‘ತೇಜೋಮಂಡಲ’. ಆಂಗ್ಲ ಭಾಷೆಯಲ್ಲಿ ಇದನ್ನು ‘Halos’ ಎಂದು ಕರೆಯುತ್ತಾರೆ. ತೇಜೋಮಂಡಲಗಳು ಬಣ್ಣದ ಅಥವಾ ಬಿಳಿ ಉಂಗುರಗಳಿಂದ ಹಿಡಿದು ಆಕಾಶದಲ್ಲಿನ ವೃತ್ತ ಖಂಡಗಳು ಹಾಗೂ ಕಲೆಗಳವರೆಗೆ ವ್ಯಾಪಿಸುವ ಅನೇಕ ರೂಪಗಳನ್ನು ಹೊಂದಿರಬಹುದು. ತೇಜೋಮಂಡಲ ಪ್ರಕಾರಗಳಲ್ಲಿ ವೃತ್ತಾಕಾರದ ತೇಜೋಮಂಡಲ ಅತ್ಯಂತ ಚಿರಪರಿಚಿತವಾದದ್ದು ಎಂದು ಹೇಳಲಾಗುತ್ತಿದೆ.