ಬಾಚಣಕಿ ಜಲಾಶಯಕ್ಕೆ ಬಾಗಿನ ಅರ್ಪಣೆ

Spread the love

ಮುಂಡಗೋಡ : ತಾಲೂಕಿನಲ್ಲಿ ರಾಮಕೃಷ್ಣ ಹೆಗಡೆಯವರು ಜಲಾಶಯಗಳನ್ನು ನಿರ್ಮಿಸಿ ರೈತರಿಗೆ ಹೆಚ್ಚಿನ ಅನುಕೂಲ ಮಾಡಿದ್ದಾರೆ. ಜಲಾಶಯಗಳ ನೀರನ್ನು ರೈತ ಸಮೂಹ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ ಮಂಗಳವಾರ ಹೇಳಿದರು.

ತಾಲೂಕಿನ ಬಾಚಣಕಿ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಹಿಂದೆ ನಿರ್ಮಿಸಿರುವ ಜಲಾಶಯಗಳನ್ನು ಇಂದು ನಿರ್ವಹಣೆ ಮಾಡಲು ನಾವು ಕಷ್ಟ ಪಡುತ್ತಿದ್ದೇವೆ. ರೈತರು ಜಲಾಶಯದ ನೀರನ್ನು ಅನಾವಶ್ಯಕವಾಗಿ ಬಳಕೆ ಮಾಡಬಾರದು. ನೀರನ್ನು ಅವಶ್ಯಕತೆಗೆ ತಕ್ಕಷ್ಟು ಬಳಕೆ ಮಾಡಿಕೊಳ್ಳಬೇಕು. ಸಚಿವ ಶಿವರಾಮ ಹೆಬ್ಬಾರ ಅವರು ಸಹ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಮಂಜೂರಿ ಮಾಡಿಸಿದ್ದು ಕಾಮಗಾರಿಯೂ ಸಹ ಆರಂಭವಾಗಿದೆ. ಈ ಯೋಜನೆಯನ್ನು ರೈತರು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು. ಕಳೆದ ಎರಡ್ಮೂರು ವರ್ಷಗಳಿಂದ ಉತ್ತಮ ಮಳೆ ಸುರಿಯುತ್ತಿರುವ ಪರಿಣಾಮ ಜಲಾಶಯಗಳು ಭರ್ತಿಯಾಗಿ ಕೊಡಿ ಹರಿಯುತ್ತಿವೆ. ಬಾಚಣಕಿ ಜಲಾಶಯ ಈ ವರ್ಷವೂ ಭರ್ತಿಯಾಗಿರುವುದು ರೈತರಿಗೆ ಸಂತಸ ಮೂಡಿಸಿದೆ ಎಂದರು.

ಆರಂಭದಲ್ಲಿ ಜಿಪಂ.ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿದರು. ಈ ವೇಳೆ ಜಿಪಂ.ಸದಸ್ಯ ರವಿಗೌಡ ಪಾಟೀಲ, ಇಂದೂರ ಪಂಚಾಯತ ಅಧ್ಯಕ್ಷೆ ಅನ್ನಪೂರ್ಣ ಬೆಣ್ಣಿ, ತಾಲೂಕಾ ಬಿಜೆಪಿ ಅಧ್ಯಕ್ಷ ನಾಗಭೂಷಣ ಹಾವಣಗಿ ಸೇರಿದಂತೆ ಇಂದೂರ, ಬಾಚಣಕಿ, ಹುನಗುಂದ ಗ್ರಾಮ ಪಂಚಾಯತ ವ್ಯಾಪ್ತಿಯ ರೈತರು, ಸಾರ್ವಜನಿಕರು ಭಾಗವಹಿಸಿದ್ದರು.