Headlines

ಕಡತ ವಿಲೇವಾರಿ ಮಾಸಾಚರಣೆ: ಕ್ರಿಯಾ ಯೋಜನೆ ರೂಪಿಸಲು ಸೂಚನೆ

Spread the love

ಕಾರವಾರ : ‘ಜಿಲ್ಲೆಯಲ್ಲಿ ಆ.16ರಿಂದ ಸೆ.15ವರೆಗೆ ಕಡತ ವಿಲೇವಾರಿ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು ಬಾಕಿ ಇರುವ ಕಡತಗಳು, ಪ್ರತಿ ವಾರಕ್ಕೆ ನಿಗದಿ ಪಡಿಸಲಾದ ಗುರಿ, ವಿಲೇವಾರಿ ಮಾಡಲಾದವು ಹಾಗೂ ಬಾಕಿ ಇರುವವುಗಳ ವಿಲೇವಾರಿಗೆ ಕೈಗೊಳ್ಳಬೇಕಾಗಿರುವ ಕ್ರಮಗಳಿಗೆ ವಿಸ್ತೃತವಾದ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.

‘ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಡತ ವಿಲೇವಾರಿ ಮಾಸಾಚರಣೆ ಹಮ್ಮಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ ಕರೆ ನೀಡಿದ್ದಾರೆ. ಅದರ ಅಂಗವಾಗಿ ಜಿಲ್ಲೆಯಲ್ಲಿ ಕಡತಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿ ಮಾಡಲು ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಇ- ಕಚೇರಿ ಹಾಗೂ ಸಕಾಲ ತಂತ್ರಾಂಶದಲ್ಲಿನ ಆನ್‌ಲೈನ್ ಕಡತಗಳನ್ನು ಕೂಡಾ ಶೀಘ್ರ ವಿಲೇವಾರಿಗೊಳಿಸಬೇಕು. ವಿಲೇವಾರಿಗೊಂಡ ಕಡತಗಳ ಮಾಹಿತಿಯನ್ನು ಪ್ರತಿ ವಾರದ ಕೊನೆಯಲ್ಲಿ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ಕಡತ ವಿಲೇವಾರಿ ಮಾಸಾಚರಣೆಯ ಅವಧಿಯಲ್ಲಿ ಅಧೀನ ಕಚೇರಿಗಳ ತಪಾಸಣೆಯನ್ನು ಕೂಡಾ ನಡೆಸಲು ಸುತ್ತೋಲೆಯಲ್ಲಿ ನಿರ್ದೇಶಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಪಿಂಚಣಿ, ಕಂದಾಯ ಅದಾಲತ್: ‘ಪಿಂಚಣಿ ಅದಾಲತ್ ಹಾಗೂ ಭೂದಾಖಲೆಗಳಲ್ಲಿ ಇರುವ ದೋಷಗಳ ತಿದ್ದುಪಡಿಗಾಗಿ ಕಂದಾಯ ಅದಾಲತ್ ಅನ್ನು ಪ್ರತಿ ತಿಂಗಳು ಮೊದಲನೇ ಹಾಗೂ ಮೂರನೇ ಶನಿವಾರ ಕಡ್ಡಾಯವಾಗಿ ಹಮ್ಮಿಕೊಳ್ಳಬೇಕು. ಈ ಬಗ್ಗೆ ಎಲ್ಲ ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಸಂಬಂಧಿಸಿದ ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರು ನಿಗದಿಪಡಿಸಲಾದ ಅದಾಲತ್‌ಗಳಲ್ಲಿ ಹಾಜರಿರಬೇಕು. ಅರ್ಜಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸ್ಥಳದಲ್ಲೇ ಇತ್ಯರ್ಥಗೊಳಿಸಲು ಕ್ರಮ ವಹಿಸಲು ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

25ರಂದು ವಿಶೇಷ ಶಿಬಿರ: ‘ಅಣಶಿ ಘಟ್ಟದಲ್ಲಿ ಉಂಟಾದ ಭೂಕುಸಿತದಿಂದಾಗಿ ರಸ್ತೆಯ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಹಾಗಾಗಿ, ಜೊಯಿಡಾ, ದಾಂಡೇಲಿ ಹಾಗೂ ಹಳಿಯಾಳ ತಾಲ್ಲೂಕುಗಳ ಸಾರ್ವಜನಿಕರಿಗೆ ಕಾರವಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಈ ತಾಲ್ಲೂಕುಗಳ ಜನರಿಗೆ ಅನುಕೂಲವಾಗುವಂತೆ ಆ.25ರಂದು ವಿಶೇಷ ಶಿಬಿರ ಹಮ್ಮಿಕೊಳ್ಳಲಾಗುತ್ತದೆ. ಬೆಳಿಗ್ಗೆ ಜೊಯಿಡಾ ಹಾಗೂ ಮಧ್ಯಾಹ್ನ ಹಳಿಯಾಳ ತಾಲ್ಲೂಕಿನ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಆಯಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿರಲಿದ್ದಾರೆ. ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಇತ್ಯರ್ಥ ಪಡಿಸಲಿದ್ದಾರೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

‘ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶೇಷ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಇದರಲ್ಲಿ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ಜೊಯಿಡಾ, ದಾಂಡೇಲಿ ಹಾಗೂ ಹಳಿಯಾಳ ತಾಲ್ಲೂಕುಗಳ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದ್ದಾರೆ.