‘SC, ST ಸಮುದಾಯ’ಕ್ಕೆ ಮಂಜೂರಾದ ಜಮೀನು ಪರಭಾರೆ ಮಾಡೋ ಮೊದಲ ಸರ್ಕಾರದ ಅನುಮತಿ ಪಡೆಯೋದು ಕಡ್ಡಾಯ – ರಾಜ್ಯ ಸರ್ಕಾರ ಆದೇಶ

Spread the love

ಬೆಂಗಳೂರು : ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡವರಿಗೆ ಮಂಜೂರಾದ ಜಮೀನುಗಳನ್ನು ಸರ್ಕಾರದ ಪೂರ್ವಾನುಮತಿ ಇಲ್ಲದೇ ಪರಭಾರೆ ಮಾಡಬಾರದು ಎಂಬುದಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಿ ಬಲರಾಮ್ ಸುತ್ತೋಲೆ ಹೊರಡಿಸಿದ್ದು, ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾದ ಜಮೀನುಗಳನ್ನು ಸರ್ಕಾರದ ಪೂರ್ವಾನುಮತಿ ಇಲ್ಲದೇ ಪರಭಾರೆ ಮಾಡಲು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ( ಕೆಲವು ಭೂಮಿಗಳ ಪರಭಾರೆ ನಿಷೇಧ ) ಅಧಿನಿಯಮ 1978ರನ್ವಯ ನಿರ್ಬಂಧವನ್ನು ವಿಧಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಭೂ ರಹಿತರಾಗುವುದನ್ನು ತಪ್ಪಿಸುವ ಧ್ಯೇಯೋದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದಕ್ಕೆ ಪೂರಕವಾಗಿ ಕಾಲದಿಂದ ಕಾಲಕ್ಕೆ ಉದ್ಬವವಾಗುವ ಸಮಸ್ಯೆಗಳನ್ನು ಮತ್ತು ಸ್ಪಷ್ಟೀಕರಣಗಳನ್ನು ನಿವಾರಿಸಲು ಸರ್ಕಾರವು ಆಗಿಂದಾಗ್ಗೆ ಹಲವಾರು ಸುತ್ತೋಲೆಗಳನ್ನು ಹೊರಡಿಸಿರುತ್ತದೆ ಎಂದು ತಿಳಿಸಿದ್ದಾರೆ.

ಆದ್ರೇ.. ಕೆಲವು ಸ್ಥಾಪಿತ ಹಿತಾಸಕ್ತಿಗಳು ದುರುಪಯೋಗಪಡಿಸಿಕೊಂಡು, ಪಿಟಿಸಿಎಲ್ ಕಾಯ್ದೆಯ ವ್ಯಾಪ್ತಿಗೊಳಪಡುವ ಜಮೀನುಗಳನ್ನು ಸರ್ಕಾರದಿಂದ ಅನುಮತಿ ಪಡೆಯದೇ ಭೂ ಪರಿವರ್ತನೆ ಮಾಡಿ, ಮಾರಾಟ ಮಾಡುವ ಸಂಭವವಿರುವುದರಿಂದ ಪರಿಶಿಷ್ಟ ಜಾತಿ, ಪಂಗಡದ ಜನರು ಭೂರಹಿತರಾಗುವ ಸಾಧ್ಯತೆಗಳು ಹೆಚ್ಚಾಗುವುದಲ್ಲದೇ, ಪಿಟಿಸಿಎಲ್ ಕಾಯ್ದೆಯ ಮೂಲ ಉದ್ದೇಶವು ಸಫಲವಾಗುವುದಿಲ್ಲ.

ಈ ಹಿನ್ನಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡವರು ಭೂರಹಿತರಾಗುವುದನ್ನು ತಡೆಯಲು ಹಾಗೂ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಧಿನಿಯಮ 1978ರ ಧ್ಯೇಯೋದ್ದೇಶಗಳನ್ನು ಗಂಭೀರವಾಗಿ ಪಾಲಿಸುವ ದೃಷ್ಠಿಯಿಂದ ಈ ಹಿಂದಿನ ಸುತ್ತೋಲೆ, ಸೂಚನೆ, ನಿರ್ದೇಶನಗಳನ್ನು ಮುಂದುವರೆಸುತ್ತಾ, ಇನ್ಮುಂದೆ ಪಿಟಿಸಿಎಲ್ ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಜಮೀನುಗಳನ್ನು ಭೂಪರಿವರ್ತಿನೆ ಮಾಡುವ ಮೊದಲು ಸರ್ಕಾರದಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆದ ನಂತ್ರವಷ್ಟೇ ಭೂ ಪರಿವರ್ತನೆ ಮಾಡತಕ್ಕದ್ದು ಎಂದು ಸೂಚಿಸಿದೆ. ತಪ್ಪಿದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳನ್ನೇ ನೇರ ಜವಾಬ್ದಾರರನ್ನಾಗಿ ಮಾಡಲಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.