‘ಆಟೋರಾಜ ಶಂಕರ್ ನಾಗ್’ ಪುಣ್ಯಸ್ಮರಣೆ ಇಂದು : ನಟ ಶಂಕರ್‌ನಾಗ್‌ ತಮ್ಮ ಜೀವನದ ‘ಕೊನೆಯ ಸಂದರ್ಶನ’ದಲ್ಲಿ ಹೇಳಿದ್ದೇನು.?

Spread the love

ಬೆಂಗಳೂರು : ಆಟೋರಾಜ, ಕರಾಟೆ ಕಿಂಗ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಯಾರನ್ನಾದ್ರೂ ಕೇಳಿದ್ರೆ ನಮ್ಮ ಶಂಕರಣ್ಣ ಅಂತ ಹೆಮ್ಮೆಯಿಂದ ಹೇಳ್ತಾರೆ. ಚಿಕ್ಕವರಿಂದ ಹಿಡಿದು, ದೊಡ್ಡವರ ವರೆಗೂ ಇವರು ಎಲ್ಲರಿಗೂ ಗೊತ್ತು. ಇವರು ನಮ್ಮಿಂದ ದೂರ ಆಗಿ ಅನೇಕ ವರ್ಷಗಳಾಗಿವೆ . ಆದರೂ ಇವರನ್ನ ಇಲ್ಲಿಯವರೆಗೂ ಯಾರು ಮರೆತಿಲ್ಲ . ನಮ್ಮಲ್ಲಿ ಈಗಲೂ ಎಷ್ಟೋ ಜನ ಆಟೋ ಡ್ರೈವರ್ ಗಳು ಇವರನ್ನ ಮನಸ್ಸಿನಲ್ಲಿ ಪೂಜಿಸುತ್ತಾರೆ . ಇಂತಹ ಆಟೋರಾಜ ಶಂಕರ್ ನಾಗ್ ಇಂದು ಹುಟ್ಟಿದ ದಿನ. ಈ ಸಂದರ್ಭದಲ್ಲಿ, ಅವರು ಆಕಾಶವಾಣಿಗೆ ನೀಡದಂತ ಕೊನೆಯ ಸಂದರ್ನವನ್ನು ಮುಂದೆ ಓದಿ..

ಜುಲೈ ತಿಂಗಳ 1988ರ ಸಮಯದಲ್ಲಿ ಶಂಕರ್ ನಾಗ್ ‘ಆಕಾಶವಾಣಿ’ಗೆ ಕೊನೆಯ ಸಂದರ್ಶನ ನೀಡುತ್ತಾರೆ. ಈ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹೀಗೆ ಹೇಳಿಕೊಳ್ಳುತ್ತಾರೆ. ಜುಲೈ ತಿಂಗಳ 1988ರ ಸಮಯದಲ್ಲಿ ಶಂಕರ್ ನಾಗ್ ‘ಆಕಾಶವಾಣಿ’ಗೆ ಕೊನೆಯ ಸಂದರ್ಶನ ನೀಡುತ್ತಾರೆ. ಈ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹೀಗೆ ಹೇಳಿಕೊಳ್ಳುತ್ತಾರೆ.

ತೂರೂ ರೂ ರೂ.. ತೂರೂ ರೂ ರೂ.. ಅರೇ ಅರೇ..

ಕ್ಷಮಿಸಿ ನಿಮ್ಮ ಕಡೆಗೆ ಗಮನ ಹರಿಯಲಿಲ್ಲ. ಅಂದರೆ ನಿಮ್ಮ ಗಮನ ರೆಡಿಯೋ ಮೇಲೆ ಇದೆಯಾ ಇಲ್ವಾ ಅಂತ ಅದಕ್ಕೆ ನಾನು ಅಲಲಾ ಅಲಲಾ ಅಂತ ಹಾಡ್ತಾ ಇದ್ದೆ. ಅಂದಹಾಗೆ ನನ್ನ ಪರಿಚಯ ಮಾಡಿಕೊಳ್ಳಲೇ ಇಲ್ಲ. ಓ ಪರಿಚಯದಲ್ಲಿ ಏನಿದೆ ಮಾರಾಯ ಎಂದು ನೀವು ಹೇಳಬಹುದು. ಪರಿಚಯದಿಂದ ಇದೆ ಇದೆ. ಪರಿಚಯ ಆದರೆ, ನಾವು ನೀವು ಪರಸ್ಪರ ಹತ್ತಿರ ಆಗ್ತೀವಿ.

ಅಂದರೆ ನನ್ನ ಮಾತು ಕೇಳಿದರೆ ನಿಮಗೆ, ನಿಮ್ಮ ಮಾತು ಕೇಳಿದರೆ ನನಗೆ, ಒಂಥರ ಅನುಕಂಪ ಪೂರಿತ ವಾತಾವರಣ ನಮ್ಮ ನಿಮ್ಮ ನಡುವೆ ನಿರ್ಮಾಣ ಆಗುತ್ತದೆ. ಅದಕ್ಕೆ ಪರಸ್ಪರ ಪರಿಚಯ ಮುಖ್ಯ. ಅದಕ್ಕೆ ನನ್ನ ಹೆಸರು ನಾಗರಕಟ್ಟೆ ಶಂಕರ, ಉರೂಫ್ ಶಂಕರ್ ನಾಗ್ ಅಂತ..

ನೋಡಿ ಸ್ವಾಮಿ ನಾವೀಗೆ ಇರೋದಕ್ಕೆ ಕಾರಣ ‘ಒಂದಾನೊಂದು ಕಾಲದಲ್ಲಿ’ ಅಂದರೆ ಗಿರೀಶ್ ಕಾರ್ನಾಡ್ ಅವರ ಚಿತ್ರ, ಒಂದಾನೊಂದು ಕಾಲದಲ್ಲಿ.

ಆ ಒಂದಾನೊಂದು ಕಾಲದಲ್ಲಿ ಸಿನಿಮಾದಲ್ಲಿ ಅವಕಾಶ ಸಿಗುವ ಮುಂಚೆ, ನಾನು ಬಹಳಷ್ಟು ನಾಟಕಗಳಲ್ಲಿ ಕೆಲಸ ಮಾಡ್ತಾ ಇದ್ದೆ. ಪಾತ್ರ, ನಿರ್ದೇಶನ, ಲೈಟಿಂಗ್, ಬ್ಯಾಕ್ ಸ್ಟೇಜ್ ಎಲ್ಲಾ. ಜೊತೆಗೆ ಬ್ಯಾಂಕ್ ನಲ್ಲೂ ಕೆಲಸಾ ಮಾಡ್ತಾ ಇದ್ದೆ. ಮ್ಯಾನೇಜರ್ ಆಗಿ ಅಲ್ಲ, ಅಕೌಂಟೆಂಟ್ ಅಲ್ಲ, ಓಸಿಯಾಗಿ.

ಓಸಿರೀ ಅಂದರೆ ಗೊತ್ತಿಲ್ವಾ ಆರ್ಡಿನರಿ ಕ್ಲರ್ಕ್. ಆ ಒಂದಾನೊಂದು ಕಾಲದಲ್ಲಿ ಬ್ಯಾಂಕ್ ನೌಕರಿ ಕೆಲಸ ಮುಗಿಸಿ, ಒಂದು ನಾಟಕದ ರಿಹರ್ಸೆಲ್ ಮಾಡ್ತಾ ಇರುವಾಗ, ಗಿರೀಶ್ ಕಾರ್ನಾಡ್ ಅವರು ಬಂದರು, ನೋಡಿದರು, ಬಂದರು, ಕೇಳಿದರೂ, ‘ಸಿನಿಮಾದಲ್ಲಿ ಪಾರ್ಟ್ ಮಾಡ್ತಿಯೇನೋ ಹುಡುಗ..?’ ಅಂತ. ಸಿನಿಮಾ ಅಂದರೆ ಸ್ವಲ್ಪ ಭಯ, ಹೆದರಿಕೆ ಇದ್ದೇ ಇತ್ತು. ಆದರೂ ಧೈರ್ಯ ಮಾಡಿ, ‘ ಓ ಸಿನಿಮಾ ತಾನೇ ಅದರಲ್ಲಿ ಏನಂತೆ ಮಾಡೋಣ ಸಾರ್’ ಅಂದೆ.

ಚಿತ್ರೀಕರಣ ಪ್ರಾರಂಭ ಆಯ್ತು. ದಾಂಡೇಲಿಯ ಸುಂದರವಾದ ಕಾಡಿನ ಗಾಢ ಅರಣ್ಯದಲ್ಲಿ.

ಒಂದಾನೊಂದು ಕಾಲದಲ್ಲಿ ಸಿನಿಮಾದ ಚಿತ್ರೀಕರಣ ಮುಗೀತು. ಡಬ್ಬಿಂಗ್ ಕೂಡ ಆಯ್ತು, ಪಸ್ಟ್ ಪ್ರಿಂಟ್ ಆಚೆ ಬಂತು. ಸುತ್ತಮುತ್ತ ಇದ್ದ ಕೆಲ ಜನರು, ಅಂದರೆ, ಸಿನಿಮಾದ ಪ್ರೀ ವೀವ್ ನೋಡಿದವರು ‘ ಓ ಪರವಾಗಿಲ್ವೇ ಹುಡುಗ ಸುಮಾರಾಗಿ ಅಭಿನಯ ಮಾಡ್ತಾನೆ’ ಅಂದರು.

ಈ ಮಾತು ಕೇಳಿದ್ದೇ ಕ್ಷಣ, ನನ್ನ ಹುಬ್ಬು ತಲೆ ಕೂದಲಿಗೆ ಹೆಗರಿ ಸಿಕ್ಕಾಕೊಂಡಿತು. ಇನ್ ಪ್ಯಾಕ್ಟ್ ನಾನು ಸಿನಿಮಾ ನಟ ಆಗ್ತೀನಿ ಅಂತ ಕನಸು ಮನಸಿನಲ್ಲಿ ಅಂದುಕೊಂಡು ಇರಲಿಲ್ಲ. ರಜತ ಪರದೆ ಮೇಲೆ ಮೊದಲ ಸಲ ನನ್ನನ್ನು ನಾನೇ ನೋಡಿಕೊಂಡಾಗ, ಒಂಥರಾ ಅನ್ನಿಸಿತು. ಇದ್ಯಾಕ್ ನನ್ನ ಮುಖ ಹೀಗೆ ಕಾಣಿಸ್ತಾ ಇದೆ.

ಅದ್ಯಾಕೆ ನಡೆಯುವಾಗ ನನ್ನ ಕೈ ಒಂಕ್ ಒಂಕಾಗೀ ಎಲ್ಲೆಲ್ಲೋ ಹೋಗುತ್ತದೆ ಎಂದೆಲ್ಲಾ ಮೊದಲಾದ ಯೋಚನೆಗಳು ಹುಟ್ಟಿಕೊಂಡವು. ಈ ಯೋಚನೆಯಲ್ಲಿ ಇರುವಾಗಲೇ ಅಬ್ಬಯ್ಯ ನಾಯ್ಡು ಅವರ ಕಣ್ಣು ನನ್ನ ಮೇಲೆ ಬೀಳ್ತು. ಅನಂತರ ‘ಸೀತಾರಾಮು’ ಚಿತ್ರದಲ್ಲಿ ನನಗೆ ನಟನೆ ಮಾಡಲು ಒಂದು ದೊಡ್ಡ ಅವಕಾಶ ಕೊಟ್ಟರು.

ಮೊದಲನೆಯ ದಿನ ಚಿತ್ರೀಕರಣಕ್ಕೆ ಹೋದರೆ ನನ್ನ ಹೃದಯ ಅಲ್ಲೇ ನಿಂತು ಬಿಟ್ಟಿತು. ಯಾಕೆಂದರೆ, ಮೊದಲನೆಯ ದಿನವೇ ಸೀತಾರಾಮು ಚಿತ್ರದ ಸೂಪರ್ ಹಿಟ್ ಗೀತೆ ‘ ಒಂದೇ ಒಂದು ಆಸೆಯೂ ತೋಳಲಿ ಬಳಸಲು.

ಒಂದೇ ಒಂದು ಬಯಕೆಯೂ ನಿನ್ನ ಮುದ್ದಾಡಲು ‘ ಹಾಡಿನ ಚಿತ್ರೀಕರಣ ನಡೆಸಿದ್ದು. ಈ ಹಾಡಿನ ಚಿತ್ರೀಕರಣ ಮುಗಿಯೋ ಅಷ್ಟರಲ್ಲಿ ನಿಂತೋಗಿರೋ ನನ್ನ ಹೃದಯ ಆಚೆನೇ ಬಂತು ಅಂದರೆ, ಅದು ಅತಿಶಯೋಕ್ತಿ ಏನಲ್ಲ. ಯಾಕೆಂದರೆ, ಚಿತ್ರೀಕರಣಕ್ಕೂ ಮುಂಚೆ ಎಲ್ಲೂ ಸ್ಕ್ರೀನ್ ಮೇಲೆ ಹಾಡಿರಲಿಲ್ಲ, ಡ್ಯಾನ್ಸ್ ಅಂದರೆ ಏನೂ ಅಂತ ಗೊತ್ತಿರಲಿಲ್ಲ. ಡೈರೆಕ್ಟರ್ ಸೋಮಶೇಖರ್ ಅವರು, ಡ್ಯಾನ್ಸ್ ಮಾಸ್ಟರ್ ಉಡುಪಿ ಜಯರಾಂ ಅವರು, ಆಯಂಕ್ಷನ್ ಅಂದರು, ಜಿಗಿತ ಜಿಗಿತ ಸ್ಟೆಪ್ ಹಾಕು ಅಂದರು, ನನ್ನ ಪ್ರಯತ್ನ ನಾ ಮಾಡಿದೆ.

ಕೈ ಬರಬೇಕಾದ ಜಾಗದಲ್ಲಿ ಜಿಗಿತ, ಕಾಲ್ ಬರೋ ಜಾಗದಲ್ಲಿ ಕೈ ಬರ್ತಾ ಇತ್ತು. ಕೊನೆಗೆ ಸುಸ್ತಾಗಿ ಬಿಟ್ಟು ಒಂದು ಮೂಲೆಯಲ್ಲಿ ಕುಳಿತೆ. ಆಗ ಈ ಚಿತ್ರದ ನಾಯಕಿ ಮಂಜುಳಾ ಬಂದರು. ಧೈರ್ಯ ಕೊಟ್ಟರು.

‘ಮೊದಲನೆಯ ಸಲ ಹೀಗೆ ಆಗುತ್ತದೆ ಬಿಡಿ. ನನ್ನ ಜೊತೆಗೆ ನೀವು ಒಂದು ಸ್ಟೆಪ್ ಹಾಕಿ ನೋಡಿ, ಎಲ್ಲಾ ಸರಿಹೋಗುತ್ತದೆ ಬನ್ನಿ ‘ ಅಂತ ಅಂದರು. ಅವರ ಈ ಪ್ರೋತ್ಸಾಹ, ಅವರ ಈ ಸಹಾಯ, ನಾನೆಂದೂ ಮರೆಯೋ ಹಾಗಿಲ್ಲ. ಈ ‘ಒಂದಾನೊಂದು ಕಾಲದಲ್ಲಿ’ ಚಿತ್ರ ಬಿಡುಗಡೆ ಆದನಂತ್ರ, ನನಗೆ ಎಷ್ಟೋ ಚಿತ್ರಗಳಲ್ಲಿ ಮಂಜಳಾ ಜೊತೆಗೆ ಅಭಿನಯಿಸುವ ಅವಕಾಶ ಸಿಕ್ತು.

ಆದರೆ ದುಃಖ ಒಂದೇ, ಈ ಒಳ್ಳೆಯ ಕಾಲ ಅವರ ಜೊತೆಗೆ ಕಳೆಯೋಣ ಅಂದರೆ, ಮಂಜುಳಾ ಅವರು ನಮ್ಮ ಜೊತೆಗೆ ಇಲ್ಲ..

ಕೆಲವೊಂದು ಸಲ ಮಂಜುಳಾ ಅಂತಹ ಒಳ್ಳೆಯ ನಟಿ ನಮ್ಮೊಂದಿಗೆ ಇಲ್ಲ ಎಂಬುದನ್ನು ನಂಬೋಕೆ ಆಗಲ್ಲ. ಆದರೆ ಜೀವನ ಇರೋದೆ ಹೀಗೆ ಅನ್ನಿಸುತ್ತದೆ. ಈ ಜೀವನ ಅನ್ನೋದು ನೂರಾರು ಬಣ್ಣಗಳು ಕೂಡಿ, ಎಷ್ಟು ವಿಶಾಲ ಅನಿಸುತ್ತದೋ ಅಷ್ಟೇ, ಸಂಕುಚಿತ ಆಗಿಬಿಡುತ್ತದೆ. ಒಮ್ಮೆ ತಂಪಾಗಿ, ಉದ್ದವಾಗಿ ಕಾಣಿಸೋ ಮೆತ್ತನೆಯ ಹಾಸಿಗೆ, ಕ್ಷಣಗಳಲ್ಲಿ ಸುರುಳಿಯಾಗಿ, ಗತಕಾಲಕ್ಕೆ ಹೊತ್ತುಕೊಂಡು ಹೋಗಿ ಬಿಡುತ್ತದೆ.

ಹೊಸ ರೂಪ, ಹೊಸ ಚೈತನ್ಯ ತಂದುಕೊಟ್ಟ ಅನುಭವಗಳು, ಜೀವನವನ್ನು ಸುರುಳಿಯಾಗಿಸಿತಲ್ಲಾ ಅಂತ ದುಃಖನೂ ಆಗುತ್ತದೆ. ಆದರೆ ಜೀವನ ಮಾತ್ರ ನಡದೇ ನಡೆಯುತ್ತದೆ. ‘ ದೋಣಿವಸಾಗಲಿ ಮುಂದೆ ಹೋಗಲಿ, ದೂರ ತೀರವ ಸೇರಲಿ’ ಎನ್ನುವ ಹಾಡಿನ ಸಾಲುಗಳಂತೆ.

ನನಗೆ ದೂರದ ದೇಶಕ್ಕೆ ಹೋಗುವ ಅವಕಾಶ ‘ ಒಂದು ಮುತ್ತಿನ ಕತೆ’ ಚಿತ್ರದ ಮೂಲಕ ಸಿಕ್ತು. ಅದು ಎರಡು ಕಾರಣಗಳಿಂದ ಒಂದು ಸಮುದ್ರದ ಆಳಕ್ಕೆ ಇಳಿದು ಚಿತ್ರೀಕರಣ ಮಾಡಬೇಕಿತ್ತು.

ಎರಡನೆಯದು ನೀರಲ್ಲಿ ಆಕ್ಸಿಜನ್ ಮಾಸ್ಕು ಅಥವಾ ಯಾವುದೇ ಸಹಾಯ ಇಲ್ಲದೇ ಚಿತ್ರೀಕರಣ ಮಾಡಬೇಕಾಗಿತ್ತು. ಆಗ ಸ್ವಲ್ಪ ಕಷ್ಟನೇ ಆಯ್ತು. ಕೊನೆಗೂ ಕೆನಡಾಗೆ ಹೋಗಿ ಕ್ಯಾಮರಾ ತಂದು, ಲಂಡನ್ ಗೆ ಹೋಗಿ ಒಂದು ಆಕ್ಟೋಪಸ್ ಮಾಡಿಸಿಕೊಂಡು ಬಂದು, ಮಾಲ್ಡೀವ್ಸ್ ಗೆ ಹೋಗಿ ಜರ್ಮನ್ ಕ್ಯಾಮರಾ ಮ್ಯಾನ್ ಇಟ್ಟುಕೊಂಡು, ಅಂಡರ್ ವಾಟರ್ ಶೂಟಿಂಗ್ ಮಾಡಿದ್ದು.

ಇನ್ನೂ ಸಿನಿಮಾ ಹಾಡುಗಳ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ರೆಕಾರ್ಡ್ ಮಾಡಬೇಕು ಅಂದರೆ, ಮದ್ರಾಸ್ ಅಥವಾ ಬಾಂಬೆಗೋ ಹೋಗಿ ಮಾಡಬೇಕಿತ್ತು. ಯಾಕೆಂದರೆ ಈ ರೆಕಾರ್ಡಿಂಗ್ ಸೌಲಭ್ಯಗಳು ನಮ್ಮ ಕರ್ನಾಟಕದಲ್ಲಿ ಇರಲಿಲ್ಲ.

ಅದಕ್ಕೆ ಪ್ರತೀ ಸಲ ಮದ್ರಾಸ್, ಬಾಂಬೆಗೋ ಹೋಗಿ, ತಿಂಗಳಾನುಗಟ್ಟಲೆ ಲೈನ್ ನಲ್ಲಿ ನಿಂತುಕೊಂಡು, ನಮಸ್ಕಾರ ಸರ್, ನಮಸ್ಕಾರ ಸರ್ ಅಂತ ಮಸ್ಕಾ ಹೊಡೆದು ರೆಕಾರ್ಡಿಂಗ್ ಮಾಡಬೇಕಿತ್ತು. ಕನ್ನಡ ಚಲನಚಿತ್ರ ನಿರ್ಮಾಪಕರ ಈ ಪರಿಸ್ಥಿತಿ ನೋಡಿ, ಅಯ್ಯೋ ಅನಿಸ್ತು. ಸಿನಿಮಾ ತೆಗೆಯೋದು ಕನ್ನಡದಲ್ಲಿ, ನೋಡುವ ಪ್ರೇಕ್ಷಕರು ಕನ್ನಡಿಗರು, ಆದರೆ ಸಂಗೀತ ರೆಕಾರ್ಡ್ ಮಾಡೋರು ಮಾತ್ರ ಮದ್ರಾಸ್, ಬಾಂಬೆನಲ್ಲಿ ಯಾಕೆ ಅನ್ನುವ ಬಹಳ ಯೋಚನೆ ಆಗಿತ್ತು. ಆಗ ಸಿ ವಿ ಎಲ್ ಶಾಸ್ತ್ರಿ, ಅನಂಗ್ನಾಗ್, ರಮೇಶ್ಭಟ್, ಸೂರ್ಯರಾವ್ ಮೊದಲಾದ ಸ್ನೇಹಿತರ ಹತ್ತಿರ ಆರ್ಥಿಕ ಸಹಾಯ ಪಡೆದು, ಬೆಂಗಳೂರಿನ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಬೆಂಬಲದಿಂದ, ಪ್ರೀ ರೆಕಾರ್ಡಿಂಗ್ ಸ್ಟೂಡಿಯೋ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಅವರಿಂದ ಉದ್ಘಾಟನೆ ಆಯ್ತು.

ಕನ್ನಡದಲ್ಲೂ ಒಳ್ಳೆಯ ಹಾಡುಗಾರರು, ಮ್ಯೂಸಿಯನ್ ಇದ್ದಾರೆ ಎನ್ನುವುದನ್ನು ಈ ಮೂಲಕ ತೋರಿಸಿಕೊಡಲಾಯಿತು. ಈ ಸ್ಟೂಡಿಯೋದಲ್ಲಿ ಪ್ರೀ ರೆಕಾರ್ಡಿಂಗ್ ಆದ ಮೊದಲ ಹಾಡೇ ಒಂದು ಮುತ್ತಿನ ಕಥೆ ಸಿನಿಮಾದ ‘ ಮುತ್ತೊಂದ ತಂದೆ ಕಡಲಾಳದಿಂದ ಅದೇ ಅಂದ ಇಲ್ಲಿ ಕಂಡೆ. ನೀ ನಿಲ್ಲಿ ಕಂಡ ‘ ಹಾಡು..

ಸ್ನೇಹಿತರೇ ಇಂತಹ ಸಂದರ್ಭಗಳಲ್ಲಿ ಸಂಗೀತ ನಿರ್ದೇಶಕ ‘ಇಳಯರಾಜ’ ನೆನಪಿಗೆ ಬರ್ತಾರೆ. ಅತ್ಯಂತ ಪ್ರತಿಭಾಶಾಲಿ ಸಂಗೀತ ನಿರ್ದೇಶಕ ಇಳಯರಾಜ.

ಇವರ ಸಂಗೀತ ಜಗತ್ತೇ ಬೇರೆ, ಇವರ ಟೇಕನ್ ಬೇರೆ. ಇವರೊಂದಿಗೆ ಮ್ಯೂಸಿಕ್ ಕಂಪೋಷನ್ಗೆ ಕುಳಿತುಕೊಂಡರೇ, ಸಮಯ ಹೇಗೆ ಕಳೆಯುತ್ತಿತ್ತು ಅಂತ ಗೊತ್ತೇ ಆಗ್ತಾ ಇರಲಿಲ್ಲ. ಯಾವುದಾದರೂ ಒಂದು ಸನ್ನಿವೇಶಕ್ಕೆ ಒಂದೇ ಒಂದು ಟ್ಯೂನ್ ಕೇಳಿದರೆ, ಎಂಟು, ಒಂಭತ್ತು ಟ್ಯೂನ್ ಚಿಟಿಕೆ ಹೊಡೆಯುವಷ್ಟರಲ್ಲಿ ರೆಡಿ ಮಾಡ್ತಿದ್ದರು. ಒಂದಕ್ಕಿಂತ ಒಂದು ಟ್ಯೂನ್ ಸೊಗಸಾಗಿರ್ತಾ ಇತ್ತು.

ಅದಕ್ಕೆ ಒಂದು ಉದಾಹರಣೆಯಾಗಿ ಕೊಡಬಹುದಾದ ಹಾಡು ಅಂದರೆ ಅದು ಗೀತಾ ಚಿತ್ರದ ‘ ಜೊತೆಯಲಿ, ಜೊತೆ ಜೊತೆಯಲಿ ಇರುವೆನು ಹೀಗೆ ಎಂದು ‘ ಹಾಡು..

ಹೌದು ಅಭಿಮಾನಿಗಳೇ, ಜೊತೆ ಜೊತೆಯಾಗು ಇರೋಣ. ಇದಕ್ಕೆ ನಿಮ್ಮ ಸಹಕಾರ, ಸಹಾಯ ಅತ್ಯಗತ್ಯ. ಹೇಗೆಂದರೆ, ನನ್ನ ಸಿನಿಮಾ ಬಿಡುಗಡೆ ಆದಮೇಲೆ, ನೋಡಿ ದಯವಿಟ್ಟು ನನಗೊಂದ ಸಣ್ಣ ಪತ್ರ ಬರೆಯಿರಿ. ಅದೂ ಸಿನಿಮಾ ಹೇಗೆ ಇಷ್ಟ ಆಯ್ತು ಅನ್ನೋದಕ್ಕಿಂತ ಏನು ಇಷ್ಟ ಆಗಲಿಲ್ಲ ಎನ್ನುವುದನ್ನು ಒತ್ತಿ ಒತ್ತಿ ಬರೆದುಕಳಿಸಿ.

ನನ್ನನ್ನು ತಿದ್ದುಪಡಿಸಿ.. ನಾನು ಖುಷಿಯಾಗಿರುತ್ತೇನೆ. ವಿಳಾಸ ನಂಬರ್ 28 ಕ್ರಿಶ್ಚಿಯನ್ ರಸ್ತೆ, ಬೆಂಗಳೂರು 01. ದಯವಿಟ್ಟು ಬರೆಯಿರಿ, ಅಥವಾ ಮನೆಗೆ ಬನ್ನಿ.

ಸದಾ ನನ್ನ ಮನೆಯ ಬಾಗಿಲು ತೆರೆದಿರುತ್ತದೆ.