
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಗೋ ನಿಟ್ಟಿನಲ್ಲಿ, 1000 ಹೆಚ್ಚುವರಿ ವಿಶೇಷ ಸಾರಿಗೆ ಬಸ್ ವ್ಯವಸ್ಥೆಯನ್ನು ಮಾಡಿದೆ. ಈ ಮೂಲಕ ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಕೆ ಎಸ್ ಆರ್ ಟಿ ಸಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ದಸರಾ ಹಬ್ಬದ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮವು ಬೆಂಗಳೂರಿನಿಂದ ರಾಜ್ಯದೊಳಗಿನ ಸ್ಥಳಗಳಾದಂತ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಮೈಸೂರು, ಮಡಿಕೇರಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.
ಇದಲ್ಲದೇ ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರ್ಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಮುಂತಾದ ಸ್ಥಳಗಳಿಗೆ ಮತ್ತು ಅಂತರರಾಜ್ಯದ ತಿರುಪತಿ, ವಿಜಯವಾಡ, ಹೈದರಾಬಾದ್, ತಿರುವನಂತಪುರಂ, ಕೊಟ್ಟಾಯಂ, ಚೆನ್ನೈ, ಕೊಯಮತ್ತೂರು, ಪೂನಾ, ಪಣಜಿ ಮುಂತಾದ ಸ್ಥಳಗಳಿಗೆ ಹಾಗೂ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ದಿನಾಂಕ 13-10-2021 ರಿಂದ 21-10-2021ರವರೆಗೆ 1000 ಹೆಚ್ಚುವರಿ ವಿಶೇಷ ಬಸ್ ಗಳನ್ನು ಕಾರ್ಯಾಚರಣೆ ಮಾಡಲಾಗುವುದು.
ಹೆಚ್ಚುವರಿ ವಿಶೇಷ ಸಾರಿಗೆಗಳ ಪ್ರಯಾಣ ದರಗಳಲ್ಲಿ ಯಾವುದೇ ಹೆಚ್ಚಳ ಇರೋದಿಲ್ಲ. ನಿಗಮದ ವೆಬ್ ಸೈಟ್ www.ksrtc.karnataka.gov.in ಹಾಗೂ ಕರ್ನಾಟಕ ಮತ್ತು ಅಂತರರಾಜ್ಯದಲ್ಲಿರುವ ಗಣಕೀಕೃತ ಬುಕ್ಕಿಂಗ್ ಕೌಂಟರ್ ಗಳ ಮುಖಾಂತರ ಈ ಸಾರಿಗೆಗಳಿಗೆ ಮುಂಗಡ ಆಸನ ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರು ಹೆಚ್ಚುವರಿ ವಿಶೇಷ ಸಾರಿಗೆಗಳ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದೆ.