ಬಿಜೆಪಿ ನಾಯಕನ ಸ್ಪೋಟಕ ಆಡಿಯೋ ಬಹಿರಂಗ: ಬಿಜೆಪಿ ವಿರುದ್ಧ ಸರಣಿ ಟ್ವಿಟ್ ನಲ್ಲಿ ಕಾಂಗ್ರೆಸ್ ಕುಟುಕು

Spread the love

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯ ಬಿಜೆಪಿ ನಾಯಕರ ಬಾಯಲ್ಲೇ ಕಾಣಿಸುತ್ತಿದೆ. ಈ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಜನಾಭಿಪ್ರಾಯ ಇಲ್ಲ, ಮುಂದೆ ಅಧಿಕಾರಕ್ಕೆ ಬರುವುದೂ ಇಲ್ಲ ಎಂಬ ಸತ್ಯ ಅವರಿಗೂ ಗೊತ್ತಿದೆ. ಡಬಲ್ ಇಂಜಿನ್ ಸರ್ಕಾರ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಸಿ.ಪಿ ಯೋಗೇಶ್ವರ್ ವಿರುದ್ಧ ಗುಡುಗಿದೆ.

ಈ ಬಗ್ಗೆ ಸರಣಿ ಟ್ವಿಟ್ ಮಾಡಿದ್ದು, ಕಪೋಲ ಕಲ್ಪಿತ ‘ಚುನಾವಣಾ ಚಾಣಕ್ಯ’ನ ವಾಸ್ತವ ನಡವಳಿಕೆ ಬಿಜೆಪಿ ನಾಯಕರಿಗೇ ಗೊತ್ತಿದೆ. ಕ್ರಿಮಿನಲ್ ಪ್ರಕರಣದಲ್ಲಿ ಜೈಲು ಸೇರಿ ಬಂದವರ ರೌಡಿಸಂ ವರ್ತನೆ ಸಹಜ. ನಾಯಕರೇ ರೌಡಿಗಳಾಗಿರುವಾಗ ಅವರ ಪಕ್ಷಕ್ಕೆ ರೌಡಿಗಳ ಸೇರ್ಪಡೆಯೂ ಸಹಜವೇ. ಬಿಜೆಪಿ ಪಕ್ಷ ರೌಡಿಗಳ ಪಕ್ಷ ಎಂಬುದು ಅವರ ನಾಯಕರಿಂದಲೇ ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದೆ.

ಆಪರೇಷನ್ ಕಮಲದ ಮೂಲಕ ಅಧಿಕಾರ ಪಡೆದ ಬಿಜೆಪಿ ನಿಜ ಬಣ್ಣ ದಿನೇ ದಿನೇ ಬಟಾ ಬಯಲಾಗುತ್ತಿದೆ! ವಾಮ ಮಾರ್ಗದ ಮೂಲಕ ಅಧಿಕಾರ ಪಡೆದ ಬಿಜೆಪಿ ತನ್ನದೇ ಪಕ್ಷದ ಶಾಸಕರ ಹೇಳಿಕೆಗಳಿಂದ ಪ್ರತಿ ದಿನ ಬೆತ್ತಲಾಗುತ್ತಿದೆ. ರಾಜ್ಯದ ಜನ ಬಿಜೆಪಿ ಗೆ ಪಾಠ ಕಲಿಸಲು ಕಾಯ್ತಿತಿದ್ದಾರೆ ಎಂದು ತಿಳಿಸಿದೆ.

ಈ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಜನಾಭಿಪ್ರಾಯ ಇಲ್ಲವೇ ಇಲ್ಲ. ಸ್ವಂತ ಶಕ್ತಿಯ ಮೇಲೆ ಗೆಲ್ಲುವ ಸಾಮರ್ಥ್ಯವೂ ಇಲ್ಲ. ಆಪರೇಷನ್ ಕಮಲದಂತಹ ಅನಿಷ್ಟಗಳ ಮೂಲಕ ಸರ್ಕಾರ ಮಾಡುತ್ತೇವೆ ಎಂದು ಘಂಟಾಘೋಷವಾಗಿ ಲಜ್ಜೆಯಿಲ್ಲದೆ ಹೇಳಿಕೊಳ್ಳುವ ಪ್ರಪಂಚದ ಏಕೈಕ ಪಕ್ಷ ಬಿಜೆಪಿ ಎಂಬುದಾಗಿ ವಾಗ್ಧಾಳಿ ನಡೆಸಿದೆ.