ಸದ್ಯದ ರಾಜಕೀಯ ಸ್ಥಿತಿ…ಯಲ್ಲಾಪುರ ಕ್ಷೇತ್ರ:ಚತುಷ್ಕೋನ ಸ್ಪರ್ಧೆ

Spread the love

ಮುಂಡಗೋಡ : ಯಲ್ಲಾಪುರ ಕ್ಷೇತ್ರದಲ್ಲಿ ಸದ್ಯದ ಸ್ಥಿತಿಯನ್ನು ಗಮನಿಸಿದರೆ ಕಾಂಗ್ರೆಸ್, ಬಿ.ಜೆ.ಪಿ., ಜೆ.ಡಿ.ಎಸ್., ಕೆ.ಆರ್.ಪಿ.ಪಿ. ನಡುವೆ ಚತುಷ್ಕೋನ ಸ್ಪರ್ಧೆ ನಡೆಯುವ ಲಕ್ಷಣ ಕಂಡು ಬಂದಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆ ತೀವ್ರ ಬದಲಾವಣೆಯಾಗಲಿದ್ದು ತ್ರಿಕೋನ ಸ್ಪರ್ಧೆ ಇಲ್ಲವೇ ನೇರ ಸ್ಪರ್ಧೆ ನಡೆದರೂ ಅಚ್ಚರಿಪಡಬೇಕಾಗಿಲ್ಲ.
ಯಲ್ಲಾಪುರ ಕ್ಷೇತ್ರ ಹೈವೋಲ್ಟೇಜ ಕ್ಷೇತ್ರವಾಗಿದೆ.
ಬಿಜೆಪಿಯಿಂದ ಸಚಿವ ಶಿವರಾಮ ಹೆಬ್ಬಾರ, ಕಾಂಗ್ರೆಸನಿಂದ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಉದ್ಯಮಿ ಸಂತೋಷ ರಾಯ್ಕರ, ಜೆ.ಡಿ.ಎಸ್.ನಿಂದ ಪ್ರೋ.ನಾಗೇಶ ನಾಯ್ಕ ಕಾಗಾಲ ಅವರ ಸ್ಪರ್ಧೆ ಇಲ್ಲಿ ಎದ್ದು ಕಾಣುತ್ತದೆ.
ಸಚಿವ ಶಿವರಾಮ ಹೆಬ್ಬಾರ ಹಾಗೂ ಮಾಜಿ ಶಾಸಕ ವಿ.ಎಸ್.ಪಾಟೀಲರು ಪಕ್ಕಾ ಪಳಗಿದ ರಾಜಕಾರಣಿಗಳಾಗಿದ್ದಾರೆ. ಜೊತೆಗೆ ರಾಜಕಾರಣದ ಎಲ್ಲಾ ಸೂಕ್ಷ್ಮ ಪಟ್ಟುಗಳನ್ನು ಕರತಲಾಮಲಕಗೊಳಿಸಿಕೊಂಡವರು.
ಶಿವರಾಮ ಹೆಬ್ಬಾರ ಹಾಗೂ ವಿ.ಎಸ್.ಪಾಟೀಲರ ರಾಜಕೀಯ ಪಕ್ಷ ತಿರುವು ಮುರುವಾಗಿದೆ.
ಕಾಂಗ್ರೆಸನ ಶಿವರಾಮ ಹೆಬ್ಬಾರ ವಿರುದ್ಧ 2008ರ ಚುನಾವಣೆಯಲ್ಲಿ ಬಿ.ಜೆ.ಪಿ.ಯ ಪಾಟೀಲ್ 2485 ಮತಗಳಿಂದ ಗೆದ್ದಿದ್ದರು. 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹೆಬ್ಬಾರರು ಬಿಜೆಪಿ ಅಭ್ಯರ್ಥಿ ಪಾಟೀಲರ ವಿರುದ್ಧ 22,492 ಮತಗಳ ಅಂತರದಿಂದ ಮತ್ತು 2018ರ ಚುನಾವಣೆಯಲ್ಲಿ 1904 ಮತಗಳಿಂದ ಗೆದ್ದಿದ್ದರು.
ಹೆಬ್ಬಾರ್ ಮತ್ತು ಪಾಟೀಲರ ಸಾಂಪ್ರದಾಯಿಕ ಎದುರಾಳಿತನವನ್ನು ಪರಿಗಣಿಸುವುದಾದರೆ ಪಾಟೀಲರು ಒಮ್ಮೆ ಸ್ವಲ್ಪ ಹೆಚ್ಚು ಅಂತರದ ಗೆಲುವು ಕಂಡರೆ ಹೆಬ್ಬಾರ ಅವರು ಒಮ್ಮೆ ದೊಡ್ಡ ಅಂತರದ ಗೆಲವು ಮತ್ತು ಒಮ್ಮೆ ಕಡಿಮೆ ಅಂತರದ ಗೆಲುವು ದಾಖಲಿಸಿದ್ದಾರೆ.
ಹಾಗೆಯೇ ಈ ಬಾರಿ ಕೂಡ ಸಮಬಲ ಹೋರಾಟ ಕಂಡರೂ ಆಶ್ಚರ್ಯವಿಲ್ಲ ಎನ್ನಬಹುದು.
ಜನಾರ್ಧನ್ ರೆಡ್ಡಿಯ ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಅಭ್ಯರ್ಥಿ ಸಂತೋಷ್ ರಾಯ್ಕರ ಅವರು ಉದ್ಯಮಿಯಾಗಿದ್ದು ಕೊಡುಗೈ ದಾನಿಯಾಗಿದ್ದಾರೆ. ಕ್ಷೇತ್ರ ಹಾಗೂ ಬೇರೆ ಜಿಲ್ಲೆ, ತಾಲೂಕುಗಳಲ್ಲೂ ಅವರು ಸಂಕಷ್ಟದಲ್ಲಿದ್ದ ಹಲವರಿಗೆ ಸಹಾಯ ಮಾಡಿದ್ದಾರೆ. ಬಡವರ ಕಷ್ಟಕ್ಕೆ ನೆರವಾಗಿದ್ದಾರೆ ಮುಂಡಗೋಡ ತಾಲೂಕಿನ ಮಳಗಿಯವರಾದ ಇವರು ಕ್ಷೇತ್ರಕ್ಕೆ ಚಿರಪರಿಚಿತರು. ಅವರದೇ ಆದ ಅಭಿಮಾನ ಬಳಗವಿದೆ.
ಇನ್ನು ಜೆ.ಡಿ.ಎಸ್.ನ ಪ್ರೋ. ನಾಗೇಶ್ ನಾಯ್ಕ ಕಾಗಾಲ ಅವರು ಕ್ಷೇತ್ರಕ್ಕೆ ಹೊಸಬರು. ಆದರೂ ಕೆಲ ತಿಂಗಳಿಂದ ಕ್ಷೇತ್ರದಲ್ಲಿ ಓಡಾಟ ಮಾಡಿ ಜೆ.ಡಿ.ಎಸ್.ನ ಪ್ರಚಾರ ಕೈಗೊಂಡಿದ್ದಾರೆ.
ಇನ್ನು ಕ್ಷೇತ್ರದ ಜಾತಿವಾರು ಮತಗಳನ್ನು ಗಮನಿಸುವುದಾದರೆ ಬ್ರಾಹ್ಮಣ, ನಾಮಧಾರಿ, ಲಿಂಗಾಯತ, ಮರಾಠ ಸಮುದಾಯ ಕ್ರಮವಾಗಿ ಹೆಚ್ಚಿನ ಮತಗಳನ್ನು ಹೊಂದಿದೆ.
ಒಟ್ಟೂ ಮತದಾರರ ಸಂಖ್ಯೆ 1,79,474. ಇದರಲ್ಲಿ ಬ್ರಾಹ್ಮಣ (ಹವ್ಯಕ,ಜಿ.ಎಸ್.ಬಿ., ದೈವಜ್ಞ ಸೇರಿ) 25,291. ನಾಮಧಾರಿ(ಈಡಿಗ, ಪೂಜಾರಿ ಸೇರಿ) 21,043. ಮರಾಠಾ 16,486, ಲಿಂಗಾಯತ ಸಮುದಾಯ 21,659. ಮುಸ್ಲೀಮ ಸಮುದಾಯದ 14,598 ಮತಗಳಿವೆ.

ಬ್ರಾಹ್ಮಣ ಮತಗಳು ಯಲ್ಲಾಪುರ ತಾಲೂಕು ಮತ್ತು ಬನವಾಸಿಯಲ್ಲಿ ಹೆಚ್ಚಿದ್ದರೆ ನಾಮಧಾರಿ ಸಮುದಾಯದ ಮತಗಳು ಬನವಾಸಿ, ಯಲ್ಲಾಪುರ ಭಾಗದಲ್ಲಿ ಹೆಚ್ಚಿವೆ. ಮುಂಡಗೋಡ ಭಾಗದಲ್ಲಿ ಸ್ಪಲ್ಪಮಟ್ಟಿಗಿದೆ.
ಮರಾಠಾ ಸಮುದಾಯದ ಮತಗಳು ಯಲ್ಲಾಪುರ, ಮುಂಡಗೋಡ ತಾಲೂಕಿನಲ್ಲಿ ಹೆಚ್ಚಿದ್ದರೆ ಲಿಂಗಾಯತ ಸಮುದಾಯದ ಮತಗಳು ಮುಂಡಗೋಡ ಭಾಗದಲ್ಲಿ ಹೆಚ್ಚು ಮತ್ತು ಬನವಾಸಿ ಭಾಗದಲ್ಲಿ ಸ್ವಲ್ಪಮಟ್ಟಿಗೆ ಇದೆ.
ಮುಸ್ಲೀಮ ಸಮುದಾಯದ 14,598 ಮತಗಳು ಕ್ಷೇತ್ರಾದ್ಯಂತ ಹಂಚಿಕೊಂಡಿದೆ.