ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರಕ್ಕೆ ವಿಧಾನಸೌಧದಲ್ಲಿ ಸಿದ್ಧತೆ: ಮೇ 24ಕ್ಕೆ ನೂತನ ಸ್ಪೀಕರ್ ಆಯ್ಕೆ

Spread the love

ಬೆಂಗಳೂರು: ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಎಲ್ಲ ಪಕ್ಷಗಳ ನೂತನ ಶಾಸಕರ ಪ್ರಮಾಣವಚನಕ್ಕೆ ವಿಧಾನಸಭೆ ಸಚಿವಾಲಯ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಹಂಗಾಮಿ ಸ್ಪೀಕರ್ ಆರ್.ವಿ. ದೇಶಪಾಂಡೆ ಅವರ ಸಮ್ಮುಖದಲ್ಲಿ ಎಲ್ಲ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ನಂತರ ನೂತನ ಸದಸ್ಯರಿಗೆ ಸಂವಿಧಾನ, ವಿಧಾನಸಭೆಯ ನಿಯಮಾವಳಿಗಳ ಪುಸ್ತಕ ಇರುವ ಬ್ಯಾಗ್​ಗಳನ್ನು ನೀಡಲಾಗುತ್ತದೆ.

ವಿಧಾನಸಭೆ ನಡೆಯುವ ಮೊಗಸಾಲೆ, ಲಾಂಚ್ ಸುತ್ತ ಮುತ್ತಲೂ ಸ್ವಚ್ಛಗೊಳಿಸಿರುವ ಸಿಬ್ಬಂದಿ ನಾಳೆಗೆ ಎಲ್ಲ ರೀತಿಯಲ್ಲೂ ಸಿದ್ಧತೆ ಮಾಡಿದೆ. ನಾಳೆಯಿಂದ ಮೂರು ದಿನಗಳ ವಿಧಾನಸಭೆ ಅಧಿವೇಶನ ಕರೆಯುವ ಕುರಿತು ಅಧಿಕೃತ ಆದೇಶ ಈಗಾಗಲೇ ಹೊರಡಿಸಲಾಗಿದೆ. ಮೇ 24 ರಂದು ವಿಧಾನಸಭೆಯ ನೂತನ ಸ್ಪೀಕರ್ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ. 

ಎರಡು ದಿನ ನೂತನ ಸದಸ್ಯರ ಪ್ರಮಾಣವಚನ ಸ್ವೀಕಾರ ಕಲಾಪ ನಡೆಯಲಿದೆ. ಶಾಸಕರ ಪ್ರಮಾಣವಚನ ಕಲಾಪದ ಬಗ್ಗೆ 16ನೇ ವಿಧಾನಸಭೆಗೆ ಆಯ್ಕೆಯಾಗಿರುವ ಎಲ್ಲ ಸದಸ್ಯರಿಗೂ ಮಾಹಿತಿ ನೀಡಲಾಗಿದೆ.

ಕಾಂಗ್ರೆಸ್​ನ ಹಿರಿಯ ಸದಸ್ಯ ಆರ್. ವಿ. ದೇಶಪಾಂಡೆ ಅವರು ಹಂಗಾಮಿ ಸ್ಪೀಕರ್​ರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸ್ಪೀಕರ್ ಸ್ಥಾನಕ್ಕೆ ಹೆಚ್.ಕೆ. ಪಾಟೀಲ್, ಕೆ. ಎನ್. ರಾಜಣ್ಣ, ಆರ್.ವಿ. ದೇಶಪಾಂಡೆ, ಟಿ.ಬಿ. ಜಯಚಂದ್ರ ಅವರ ಹೆಸರುಗಳು ಕೇಳಿ ಬರುತ್ತಿವೆ. ಅಂತಿಮವಾಗಿ ಹೈಕಮಾಂಡ್ ಜೊತೆಗೆ ಚರ್ಚಿಸಿ ಇವರಲ್ಲಿ ಒಬ್ಬರನ್ನು ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ.