
ನವದೆಹಲಿ: ಇತ್ತೀಚೆಗೆ 2000 ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹಿಂಪಡೆದಿದೆ.
ಸೆಪ್ಟೆಂಬರ್ 30ರ ವರೆಗೆ ಈ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಲಾಗಿದೆ. ಆದರೆ, ಬ್ಯಾಂಕ್ಗಳಲ್ಲಿ ಈ ನೋಟುಗಳ ಬದಲಾವಣೆಗೆ ಅನುಸರಿಸಬೇಕಾದ ನಿಯಮಗಳ ಬಗ್ಗೆ ಜನ ಸಾಮಾನ್ಯರಲ್ಲಿ ಸಣ್ಣ – ಪುಟ್ಟ ಗೊಂದಲಗಳು ಮುಂದುವರೆದಿವೆ. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗಾಗಿ 2000 ರೂಪಾಯಿ ನೋಟುಗಳ ಬದಲಾವಣೆ ಕುರಿತಾಗಿ ಕೆಲ ಮಾಹಿತಿಯನ್ನು ಹಂಚಿಕೊಂಡಿದೆ.
ಎಸ್‌ಬಿಐ ಗ್ರಾಹಕರು ತಮ್ಮ 2000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಯಾವುದೇ ಐಡಿ ಕಾರ್ಡ್‌ಗಳನ್ನು ಸಲ್ಲಿಸುವ ಅಥವಾ ಯಾವುದೇ ಅರ್ಜಿಗಳನ್ನು ಭರ್ತಿ ಮಾಡುವ ಅಗತ್ಯವಿಲ್ಲ. ಆದಾಗ್ಯೂ, ಒಂದು ಬಾರಿಗೆ ಗರಿಷ್ಠ ಹತ್ತು ನೋಟುಗಳನ್ನು ಬದಲಾಯಿಸಲು ಅನುಮತಿಸಲಾಗುವುದು ಎಂದು ತಿಳಿಸಿದೆ. ಈ ಮಾಹಿತಿಯನ್ನು ಎಸ್‌ಬಿಐ ತನ್ನ ಎಲ್ಲ ವಲಯಗಳೊಂದಿಗೆ ಹಂಚಿಕೊಂಡಿದೆ. ಅಲ್ಲದೇ, ಗ್ರಾಹಕರ ಗುರುತಿನ ಪುರಾವೆಯ ವಿವರಗಳಿಗಾಗಿ ಮೀಸಲಾದ ಕಾಲಮ್‌ಗಳನ್ನು ಹೊಂದಿರುವ ಅನುಬಂಧ III (Annexure III)ರಲ್ಲಿ ಮನವಿ ಅರ್ಜಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ. ಸಾರ್ವಜನಿಕರಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಿ ಮತ್ತು ಯಾವುದೇ ಅನಾನುಕೂಲತೆಯಾಗದಂತೆ ನೋಡಿಕೊಳ್ಳುವಂತೆ ಎಂದು ಎಸ್‌ಬಿಐ ಸ್ಪಷ್ಟಪಡಿಸಿದೆ.