
ಬೆಂಗಳೂರು : ರಾಜ್ಯ ಕಾಂಗ್ರೆಸ್ ಪಕ್ಷವು ಇದೀಗ ವಿಧಾನಸಭೆಯ ಸ್ಪೀಕರ್ ಆಯ್ಕೆಯತ್ತ ಗಮನ ಹರಿಸಿದ್ದು, ನಾಳೆ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಸಲು ಸಮಯ ನಿಗದಿ ಮಾಡಲಾಗಿದ್ದು, ಶಾಸಕ ಯು.ಟಿ. ಖಾದರ್ ಸ್ಪೀಕರ್ ಆಗುವ ಸಾಧ್ಯತೆ ಇದೆ.
ಹಿರಿಯ ಶಾಸಕರು ತಮಗೆ ಸಚಿವ ಸ್ಥಾನ ಬೇಕೆಂದು ಪಟ್ಟು ಹಿಡಿದಿರುವ ಕಾರಣ ಪರ್ಯಾಯ ಹುಡುಕಾಟಕ್ಕೆ ಪಕ್ಷ ಮುಂದಾಗಿತ್ತು. ವಿವಿಧ ಹೆಸರುಗಳ ಚಲಾವಣೆಗೆ ಬಂದರೂ ಅಂತಿಮವಾಗಿ ಯು.ಟಿ. ಖಾದರ್ ಬಗ್ಗೆ ಒಲವು ವ್ಯಕ್ತವಾಗಿದೆ. ಪ್ರಸ್ತುತ ಹಂಗಾಮಿ ಸ್ಪೀಕರ್ ಆಗಿರುವ ಆರ್. ವಿ. ದೇಶಪಾಂಡೆ ಅವರನ್ನೇ ಕಾಯಂ ಸ್ಪೀಕರ್ ಆಗಿ ಮಾಡಬೇಕೆಂಬುದು ಪಕ್ಷದ ನಾಯಕರ ಆಶಯವಾಗಿತ್ತು. ಆದರೆ ದೇಶಪಾಂಡೆಯವರು ಸ್ಪೀಕರ್ ಸ್ಥಾನ ಒಪ್ಪಿಕೊಳ್ಳಲು ಸಿದ್ದರಿಲ್ಲ.
ಸ್ಪೀಕರ್ ಆಗಲು ಬಹುತೇಕ ಹಿರಿಯ ಶಾಸಕರ ನಕಾರ, ಹೀಗಾಗಿ ವರಿಷ್ಟರು ಯು.ಟಿ.ಖಾದರ್ ಮನವೊಲಿಸಲು ಕಸರತ್ತು ನಡೆಸಿದ್ದು, ಸೋಮವಾರ ರಾತ್ರಿ ಯು.ಟಿ.ಖಾದರ್ ಜತೆ ಸುರ್ಜೇವಾಲ,ಕೆ.ಸಿ.ವೇಣುಗೋಪಾಲ್ ಮಾತನಾಡಿ ಸ್ಪೀಕರ್ ಜವಾಬ್ದಾರಿ ವಹಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಇಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಈಬಗ್ಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಸ್ಪೀಕರ್ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 9 ಗಂಟೆಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಬಳಿಕ ಇಂದು ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.