ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಅಂಕೋಲಾ ಮತ್ತು ಕಾರವಾರ ತಾಲೂಕಿನಲ್ಲಿ ರಾತ್ರಿ ವೇಳೆಯಲ್ಲಿ ಮನೆಗೆ ಕನ್ನ ಹಾಕಿ ಕಳ್ಳತನ ಮಾಡುತ್ತಿದ್ದ 7 ಜನ ಆರೋಪಿತರನ್ನು ಹಾಗೂ ಒಬ್ಬ ಕಳುವಿನ ಮಾಲನ್ನು ಸ್ವೀಕರಿಸುವ ವ್ಯಕ್ತಿ ಸೇರಿದಂತೆ 8 ಜನರನ್ನು ಗೋಕರ್ಣ ಪೊಲೀಸರು ಬಂಧಿಸಿದ್ದಾರೆ.
ಗೋಕರ್ಣ ಪೊಲೀಸ್ ಠಾಣೆಯ 5 ಪ್ರಕರಣಗಳು,ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯ 11 ಪ್ರಕರಣಗಳು ಹಾಗೂ ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳು ಸೇರಿದಂತೆ ಒಟ್ಟೂ 18 ಕಳ್ಳತನ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ಒಟ್ಟೂ 8 ಜನ ಆರೋಪಿತರನ್ನು ಬಂಧಿಸಿದ್ದಾರೆ.
ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರು ಅಂಕೋಲಾ ಮತ್ತು ಶಿರಸಿ ಮೂಲದವರೆನ್ನಲಾಗಿದ್ದು, ಪ್ರಶಾಂತ್ ಕಿಶೋರ ನಾಯ್ಕ (23), ಹರ್ಷಾ ನಾಗೇಂದ್ರ ನಾಯ್ಕ (22), ಶ್ರೀಕಾಂತ್ ಗಣಪತಿ ದೇವಾಡಿಗ (27), ನಿಹಾಲ ಗೋಪಾಲಕೃಷ್ಣ ದೇವಳಿ (26), ಸಂದೀಪ ಹನುಮಂತ ಮರಾಠೆ (25), ಗಣೇಶ ಮಾರುತಿ ನಾಯ್ಕ (24), ರಾಹುಲ್ ಕೃಷ್ಣಾನಂದ ಬಂಟ್ (22), ಅಶೋಕ ಗಣಪತಿ ರಾಯ್ಕರ್ (42) ಎಂದು ಗುರುತಿಸಲಾಗಿದೆ.ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನ ಒಪ್ಪಿಸಲಾಗಿದೆ.
ಬಂಧಿತರಿಂದ ಕಳ್ಳತನ ಮಾಡಿದ 351 ಗ್ರಾಂ ಬಂಗಾರದ ಆಭರಣಗಳು, 1 ಕೆ.ಜಿ ಬೆಳ್ಳಿಯ ಆಭರಣ,05 ಗ್ಯಾಸ್ ಸಿಲೆಂಡರಗಳು, 1 ಏರ್ ಗನ್, 3 ಮೋಟಾರ್ ಸೈಕಲ್ ಹಾಗೂ 8 ಮೊಬೈಲ್ ಪೋನ್ ಗಳೂ ಸೇರಿದಂತೆ ಒಟ್ಟೂ 19 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಪಿಐ ಶಿವಪ್ರಕಾಶ್ ನಾಯ್ಕ ನೇತ್ರತ್ವದಲ್ಲಿ ಪಿಎಸ್ಐ ನವೀನ್ ನಾಯ್ಕ, ಸಿಬ್ಬಂದಿಗಳಾದ ರಾಜೇಶ್ ನಾಯ್ಕ, ಸಚಿನ್ ಮತ್ತಿತರರು ಸಹಾಯದಿಂದ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್ಪಿ ಶಿವಪ್ರಕಾಶ್ ದೇವರಾಜ್ ಸಿಬ್ಬಂದಿಗಳ ಕಾರ್ಯಚರಣೆಗೆ ಬಹುಮಾನ ಘೋಷಿಸಿದ್ದಾರೆ