‘ಕರ್ನಾಟಕ ಹೈಕೋರ್ಟ್’ನಲ್ಲಿ ಸಂಗೀತದ ಹೊನಲು: ‘ಕೋರ್ಟ್ ಹಾಲ್’ ಕೆಲ ಗಂಟೆ ‘ಸಂಗೀತ ಕಛೇರಿ’ಯಾಗಿ ಮಾರ್ಪಾಡು

Spread the love

ಬೆಂಗಳೂರು: ಕರ್ನಾಟಕ ಹೈಕೋರ್ಟ್ ನಲ್ಲಿ ( Karnataka High Court ) ಇಂದು ಸಂಗೀತ ನಾದದ ಹೊನಲೇ ಹರಿದಿದೆ. ಹೀಗಾಗಿ ಕೋರ್ಟ್ ಹಾಲ್ ಕೆಲ ಗಂಟೆಗಳ ಕಾಲ ಸಂಗೀತ ಕಛೇರಿಯಾಗಿಯೂ ಮಾರ್ಪಟ್ಟಿತ್ತು. ಅದು ಯಾಕೆ ಅಂತ ಮುಂದೆ ಓದಿ.

ನಾಡಗೀತೆಗೆ ಸಂಗೀತ ಸಂಯೋಜನೆ ಸಂಬಂಧ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದಂತ ರಿಟ್ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನ ಹಾಲ್ ಸಂಖ್ಯೆ.7ರಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್‌.

ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ದಾಟಿಯಲ್ಲೇ ನಾಡಗೀತೆಯನ್ನು 2 ನಿಮಿಷ 30 ಸೆಕೆಂಡ್ ಗಳಲ್ಲಿ ಹಾಡಬೇಕು ಎಂಬ ಸರ್ಕಾರದ ಆದೇಶದ ಬಗ್ಗೆ ವಿಚಾರಣೆ ನಡೆಸಲಾಯಿತು.

ಅರ್ಜಿಯಲ್ಲಿ ನಮ್ಮನ್ನೂ ಮಧ್ಯಂತರ ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡಬೇಕು ಎಂಬುದಾಗಿ ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೃತ್ಯುಂಜಯ ದೊಡ್ಡವಾಡ ಸಲ್ಲಿಸಿದ್ದಂತ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠವು ವಿಚಾರಣೆಗೆ ಅಂಗೀಕರಿಸಿತು.

ಹೈಕೋರ್ಟ್ ನ್ಯಾಯಪೀಠಕ್ಕೆ ಮಧ್ಯಂತರ ಅರ್ಜಿದಾರರ ಪರವಾಗಿ ಹಿರಿಯ ವಕೀಲ ಸಿ.ಹೆಚ್ ಹನುಮಂತರಾಯ ವಾದ ಮಾಡಿ, ರಾಜ್ಯ ಸರ್ಕಾರ ತನ್ನೆಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೈಸೂರು ಅನಂತಸ್ವಾಮಿಯವರ ಧಾಟಿಯಲ್ಲೇ ನಾಡಗೀತೆ ಹಾಡುವುದು ಸೂಕ್ತ ಎಂದು ಆದೇಶ ಹೊರಡಿಸಿದೆ. ಈಗ ಅರ್ಜಿದಾರರು ಎತ್ತಿರುವಂತ ತಕರಾರನ್ನು ಆಲಿಸಬೇಕು. ಚರ್ಚಿಸಿ ತೀರ್ಮಾನ ಪ್ರಕಟಿಸಬೇಕು ಎಂದರು.

ಅವರ ವಾದಕ್ಕೆ ಪ್ರತಿಕ್ರಿಯಿಸಿದಂತ ನ್ಯಾಯಪೀಠವು, ಇದೇ ದಾಟಿಯಲ್ಲಿ ನಾಡಗೀತೆ ಇರಬೇಕು ಎಂಬುದಕ್ಕೆ ನಿಮ್ಮ ಬಳಿ ಇರುವ ಕಾನೂನಿನ ಬಲವನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಡಿ. ಸರ್ಕಾರದ ಆದೇಶವನ್ನು ಪುರಸ್ಕರಿಸುವ ಕಾನೂನು ಅಂಶಗಳು ಮತ್ತು ವ್ಯಾಖ್ಯಾನಗಳು ಏನಿವೆ ಎಂಬುದನ್ನು ಸಾದರಪಡಿಸಿ ಎಂಬುದಾಗಿ ಸೂಚಿಸಿತು.

ಇದಲ್ಲದೇ ರಾಜ್ಯ ಸರ್ಕಾರದ ಪರ ಹಾಜರಿದ್ದ ವಕೀಲೆ ನವ್ಯಾ ಶೇಖರ್ ಅವರಿಗೆ ಮಧ್ಯಂತರ ಅರ್ಜಿದಾರರ ಮನವಿಯನ್ನು ಪುರಸ್ಕರಿಸಲು ನಿಮ್ಮ ಬಳಿ ಇರುವ ಪೂರಕ ಅಂಶಗಳೇನು ಎಂಬುದನ್ನೂ ವಿವರಿಸಿ ಎಂದು ನಿರ್ದೇಶಿಸಿ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿತು.

ಇದಕ್ಕೂ ಮುನ್ನಾ ಬಿ.ಕೆ ಸುಮಿತ್ರಾ ಅವರು ಮೈಸೂರು ಅನಂತಸ್ವಾಮಿ, ಸಿ.ಅಶ್ವತ್ಥ್ ದಾಟಿಯಲ್ಲಿ ನಾಡಗೀತೆಯನ್ನು ಹಾಡಿ, ವ್ಯಾತ್ಯಾಸವನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಎಲ್ಲರ ಅಭಿಪ್ರಾಯವನ್ನು ಆಲಿಸಿದಂತ ನ್ಯಾಯಪೀಠವು, ಅನಂತಸ್ವಾಮಿ, ಅಶ್ವತ್ಥ್ ಇಬ್ಬರೂ ದಿಗ್ಗಜರೇ, ಅತಿರಥ ಮಹಾರಥರೇ ಎಂದು ಪ್ರಶಂಸಿತು.

ಇನ್ನೂ ಸಂಗೀತ ಎಂಬುದು ಅತಿದೊಡ್ಡ ಶಾಸ್ತ್ರ ಮತ್ತು ಅಧ್ಯಯನ ವಿಷಯವಾಗಿದೆ. ಮೇಘ-ಮಲ್ಹಾರ, ನಟ ಮಲ್ಹಾರ, ಝೀಂಜೋಟಿ, ಮಿಯಾ ತೋಡಿ, ಹೀಗೆ ಹತ್ತು ಹಲವು ರಾಗಗಳ ಹೆಸರುಗಳನ್ನು ಉದ್ದರಿಸಿ, ಮೇಲಿರುವ ರಸಋಷಿ ತನ್ನದೊಂದು ಕವತಿಗೆ ಕಲಾತಪಸ್ವಿಗಳು ಇಷ್ಟೊಂದು ಜಿಜ್ಞಾಸೆ ವ್ಯಕ್ತಪಡಿಸಿ, ಈ ರೀತಿ ಕೋರ್ಟ್ ಮೆಟ್ಟಿಲೇರಿಸುರುವುದನ್ನು ಕಂಡು ಏನೆಂದುಕೊಳ್ಳುತ್ತಾರೆಯೋ ಏನೋ ಎಂದು ಹಾಸ್ಯ ಚಟಾಕಿಯನ್ನು ಹಾರಿಸಿತು.