
ಮೈಸೂರು: ಬಿಜೆಪಿಯಲ್ಲಿ ಮುಂದೆ ಏನಾಗುತ್ತದೆ ಎಂಬುದನ್ನು ಸ್ವಲ್ಪ ದಿನ ಕಾದು ನೋಡಿ. ಅಸಮಾಧಾನ ಹೇಗೆ ಸ್ಫೋಟವಾಗುತ್ತದೆ ಎಂಬುದು ನಿಮಗೆಯೇ ಗೊತ್ತಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೈಸೂರಿನ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ನಿನ್ನೆಯ ಸಭೆಯಿಂದ ಯತ್ನಾಳ್, ಬೆಲ್ಲದ್, ಜಾರಕಿಹೊಳಿ ಏಕೆ ಎದ್ದು ಹೋದರು? ಯಡಿಯೂರಪ್ಪ ಅವರ ಮಗನನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಹಾಗೂ ಆರ್. ಅಶೋಕ್ ಅವರನ್ನು ಪ್ರತಿಪಕ್ಷದ ನಾಯಕರನ್ನಾಗಿ ಮಾಡಿರುವುದು ಅವರಿಗೆ ಇಷ್ಟವಿಲ್ಲ. ಈ ಅಸಮಾಧಾನ ಮುಂದೆ ಸ್ಫೋಟಗೊಳ್ಳಬಹುದು. ವೇಟ್ ಅಂಡ್ ಸೀ ಎಂದು ಸಿಎಂ ಹೇಳಿದರು.
ರಾಜ್ಯದಲ್ಲಿ ಈಗ ಪುನಃ ಚುನಾವಣೆ ನಡೆದರೆ ಬಿಜೆಪಿಯೇ ಗೆಲ್ಲಲಿದೆ ಎಂಬ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ರಾಜ್ಯದಲ್ಲಿ ಈಗೇಕೆ ಚುನಾವಣೆ ನಡೆಯುತ್ತದೆ? ನಾವೇ ಅಧಿಕಾರಕ್ಕೆ ಬರುತ್ತೇವೆಂದು ಹಿಂದೆಯೇ ನಾನು ಹೇಳುತ್ತಿದ್ದೆ. ಅದೇ ರೀತಿ ಅಧಿಕಾರಕ್ಕೆ ಬಂದಿದ್ದೇವೆ. ಈಗ ಚುನಾವಣೆಯ ಮಾತು ಏಕೆ? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿಗೆ ನೈತಿಕತೆ ಇಲ್ಲ: ಕುಮಾರಸ್ವಾಮಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕುಮಾರಸ್ವಾಮಿ ವಿದ್ಯುತ್ ಕದ್ದಿದ್ದು, ದಂಡ ಕಟ್ಟಿದ್ದು ಸತ್ಯ ಅಲ್ಲವೇ? ಅದನ್ನು ಕುಮಾರಸ್ವಾಮಿಯೇ ಒಪ್ಪಿಕೊಂಡಿರುವುದು ಸತ್ಯ ಅಲ್ಲವೇ? ಇಂತವರಿಂದ ನಾನು ಏನು ಹೇಳಿಸಿಕೊಳ್ಳಲಿ? ಪದೇ ಪದೇ ಕುಮಾರಸ್ವಾಮಿ ವಿಚಾರದಲ್ಲಿ ಪ್ರತಿಕ್ರಿಯೆ ಕೊಡಲು ಇಷ್ಟವಿಲ್ಲ. ಹತಾಶರಾಗಿ ಕುಮಾರಸ್ವಾಮಿ ಏನೇನೋ ಹೇಳುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದರು.