
(ವಿಲಾಸ ಮೇಲಗಿರಿ) ಬೆಂಗಳೂರು : ಸಣ್ಣ ಸಣ್ಣ ಮೊತ್ತದ ಕಾಮಗಾರಿ ಹೆಸರಿನಲ್ಲಿ ಪಾರದರ್ಶಕ ಕಾಯ್ದೆ ಉಲ್ಲಂಘಿಸಿ ಕೋಟಿ ಕೋಟಿ ಲೂಟಿ ಮಾಡುವ ದಂಧೆ ರಾಜ್ಯದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ. ಸಾರ್ವಜನಿಕ ಸಂಗ್ರಹಣೆಯಲ್ಲಿನ ಕಾರ್ಯ ವಿಧಾನಗಳನ್ನು ಸರಳೀಕರಿಸಲು ಮತ್ತು ಸಾರ್ವಜನಿಕ ಸಂಗ್ರಹಣೆಯಲ್ಲಿ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಕರ್ನಾಟಕ ಪಾರದರ್ಶಕತೆ ಕಾಯ್ದೆ ಜಾರಿಗೆ ತಂದರೂ ಗುತ್ತಿಗೆದಾರರು/ಏಜೆನ್ಸಿಗಳು ಟೆಂಡರ್ ಇಲ್ಲದೆ ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯುತ್ತಿರುವ ಬಗ್ಗೆ ಸ್ಥಳೀಯ ಸಂಸ್ಥೆಗಳು ಸುಸ್ತು ಹೊಡೆದಿವೆ.
ಜನ ಜಾಗೃತಿ ಗೋಡೆ ಬರಹಗಳು, ಡಿಜಿಟಲ್ ಲೈಬ್ರರಿಗೆ ಬೇಕಾದ ಮೋಡೆಮ್ ರೌಟರ್, ವಾಟರ್ ಪಾಟ್, ಫಿನಾಯಿಲ್, ಬ್ಲೀಚಿಂಗ್ ಪೌಡರ್, ಕಸ ಸಂಗ್ರಹಣೆ ವಾಹನ, ಡಸ್ಟ್ ಬಿನ್… ಇಂತಹ ಸಣ್ಣಪುಟ್ಟ ಖರೀದಿಯಲ್ಲಿ ಸದ್ದಿಲ್ಲದೆ ನೂರಾರು ಕೋಟಿ ರೂ. ವಹಿವಾಟು ನಡೆಯುತ್ತಿದೆ. ಇದು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲೇ ಹೆಚ್ಚಾಗಿದೆ.
ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಂವಿಧಾನ ‘ಸ್ಥಳೀಯ ಸ್ವಯಂ ಸರ್ಕಾರಗಳು’ ಎಂದು ವ್ಯಾಖ್ಯಾನಿಸಿದೆ. ಆದರೆ, ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳು ಅಧಿಕಾರಶಾಹಿ ಹಿಡಿತಕ್ಕೆ ಸಿಕ್ಕಿ ನಲುಗುತ್ತಿವೆ. ಉನ್ನತಾಧಿಕಾರಿ, ಸಚಿವರು ಇನ್ನೂ ಕೆಲ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಶಿಫಾರಸಿನ ಅನ್ವಯ ಕಾನೂನಿನ ನೆರಳಲ್ಲೇ ಯಾವುದೇ ಟೆಂಡರ್ ಇಲ್ಲದೆ ಕೋಟಿ ಕೋಟಿ ಮೊತ್ತದ ಖರೀದಿ ನಡೆಯುತ್ತಲೇ ಇದೆ. ಮೇಲಧಿಕಾರಿಗಳೇ ತಮ್ಮ ಹಂತದಲ್ಲಿ ತಮಗೆ ಸರಿ ಎನಿಸುವ ಯೋಜನೆಗಳನ್ನು ರೂಪಿಸುತ್ತಿದ್ದಾರೆ.
ಪರಿಕರ/ಉಪಕರಣ/ಸಾಮಗ್ರಿಗಳನ್ನು ಸರಬರಾಜು ಮಾಡುವ ಏಜೆನ್ಸಿಗಳನ್ನು ನೇಮಿಸಿ, ಅವರಿಂದಲೇ ವಸ್ತುಗಳನ್ನು ಖರೀದಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಇನ್ನೂ ಅಚ್ಚರಿ ಎಂದರೆ, ಗ್ರಾಮ ಪಂಚಾಯಿತಿಗಳ ಅನುಮತಿಯಿಲ್ಲದೇ ಸಾಮಗ್ರಿಗಳನ್ನು ತಂದಿಳಿಸಿ ಪಂಚಾಯಿತಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಅವುಗಳ ಹಣ ಪಾವತಿಸುವಂತೆ ಮಾಡುತ್ತಿದ್ದಾರೆ.
ರಾಜ್ಯಮಟ್ಟದಲ್ಲೇ ಟೆಂಡರ್: ರೂಫ್ ಟಾಪ್ ಸೋಲಾರ್ ಪವರ್ ಯುನಿಟ್ಗಳಿಗಾಗಿ ರಾಜ್ಯಮಟ್ಟದಲ್ಲೇ ಟೆಂಡರ್ ಕರೆಯಲಾಗಿತ್ತು. ಆದರೆ, ಇವುಗಳಿಗೆ ಹಣವನ್ನು ಪಂಚಾಯಿತಿಗಳು ಭರಿಸಿವೆ. ಈಗಾಗಲೇ ಅನುಷ್ಠಾನ ಮಾಡಿರುವ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಇವುಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ತಮ್ಮದಲ್ಲದ ತಪ್ಪಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಬೆಲೆತೆರುವಂತಾಗಿದೆ. ಅಂತೆಯೇ, ಡಿಜಿಟಲ್ ಲೈಬ್ರರಿ ಯೋಜನೆಯನ್ನು ಮೇಲಿನ ಹಂತದಲ್ಲೇ ರೂಪಿಸಿ ಅನುಷ್ಠಾನಗೊಳಿಸುವಂತೆ ಗ್ರಾಮ ಪಂಚಾಯಿತಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ.