
ಮುಂಡಗೋಡ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ (ರಿ) ಮುಂಡಗೋಡ ಹಾಗೂ ತೋಟಗಾರಿಕೆ ಇಲಾಖೆ, ಮುಂಡಗೋಡ ಇವರ ಸಹಯೋಗದೊಂದಿಗೆ ಮುಂಡಗೋಡ ಶಾಖೆಯಲ್ಲಿ ತಾಳೆ ಬೆಳೆ ಮತ್ತು ಶುಂಠಿ ಬೆಳೆಗಳ ಬೇಸಾಯ ಕ್ರಮಗಳ ಬಗ್ಗೆ ಮುಂಡಗೋಡ ತಾಲೂಕಿನ ರೈತರಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ತರಬೇತಿ ಕಾರ್ಯಕ್ರಮವನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಕೃಷ್ಣ ಕುಳ್ಳೂರ ಉದ್ಘಾಟಿಸಿದರು. ನಂತರ ಅವರು ಮಾತನಾಡುತ್ತಾ, ತಾಳೆ ಬೆಳೆಯು ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ತಾಳೆ ಬೆಳೆ ಯೋಜನೆಯಡಿ ಅನುಷ್ಠಾನ ಮಾಡುತ್ತಿರುವುದರ ಬಗ್ಗೆ ತಿಳಿಸಿದರು. ಭಾರತದ ಖಾದ್ಯ ತೈಲದ ವಾರ್ಷಿಕ ಬೇಡಿಕೆ 256 ಲಕ್ಷ ಟನ್ ಗಳಿದ್ದು 2021-22ನೇ ಸಾಲಿನಲ್ಲಿ ಖಾದ್ಯ ತೈಲದ ಉತ್ಪಾದನೆ ಕೇವಲ 126 ಲಕ್ಷ ಟನ್ ಗಳಿದ್ದು, ಉಳಿದ ಖಾದ್ಯ ತೈಲದ ಬೇಡಿಕೆಯನ್ನು ಸರಿದೂಗಿಸಲು ತಾಳೆ ಬೆಳೆ ಬೇಸಾಯ ಪ್ರಮುಖ ಪಾತ್ರವಹಿಸಬಹುದಾಗಿದೆ ಎಂದು ಅವರು ಹೇಳಿದರು.
ನಮ್ಮ ಮುಂಡಗೋಡ ತಾಲೂಕಿನಲ್ಲಿ ಪ್ರಸ್ತುತ ವರ್ಷಕ್ಕೆ 17.00 ಹೆಕ್ಟರ್ ಪ್ರದೇಶ ತಾಳೆ ಬೆಳೆಯ ಗುರಿಯು ಇದ್ದು, ಈಗಾಗಲೇ 5.00 ಹೆಕ್ಟರ್ ಪ್ರದೇಶದಲ್ಲಿ ತಾಳೆ ಬೆಳೆ ಹೊಸ ಪ್ರದೇಶ ವಿಸ್ತರಣೆ ಮಾಡಲಾಗಿದೆ ಎಂದರು.
ಇಲಾಖೆಯಿಂದ ತಾಳೆ ಬೆಳೆಯ ಸಸಿಗಳನ್ನು 3F OIL PALM ಪ್ರೈವೇಟ್ ಲಿಮಿಟೆಡ್ ಸಂಸ್ಥೆಯವರು ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಇವರು ಉತ್ಕೃಷ್ಟವಾದ ತಾಳೆ ಸಸಿಗಳನ್ನು ನೀಡುವುದರ ಜೊತೆಗೆ ಇಲಾಖೆಯೂ 4 ವರ್ಷದ ನಿರ್ವಹಣೆ ವೆಚ್ಚವನ್ನು ನೀಡುತ್ತದೆ ಎಂದು ಹೇಳಿದ ಅವರು ಇಲಾಖೆ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಲಕ್ಷ್ಮಣ ಕೆ.ಎಸ್.(ತಾಳಿ ಬೆಳೆ ಅಭಿವೃದ್ಧಿ ಅಧಿಕಾರಿಗಳು), ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಹಳಿಯಾಳ ಯೋಜನಾ ಸಂಯೋಜಕರಾದ ವಿನಾಯಕ ಚೌಹಾಣ್, ಪ್ರಗತಿಪರ ರೈತರಾದ ನಂದೀಶ್ ಹಿರೇಮಠ, ಸೋಮಣ್ಣ ಕುಂಬಾರ್ ಉಪಸ್ಥಿತರಿದ್ದರು. ಕ್ಷೇತ್ರ ಅಧಿಕಾರಿಗಳಾದ ಶಾಂತಕುಮಾರ್ ಕೀರ್ತಪ್ಪನವರ್ ಕಾರ್ಯಕ್ರಮ ನಿರೂಪಿಸಿದರು.