ಗ್ರಾಮಪಂಚಾಯಿತಿಗಳಲ್ಲಿ ಸಾರ್ವಜನಿಕರ ಸೇವೆಗಳಿಗೆ ಹಣ ಪಡೆದ್ರೆ ಕಠಿಣ ಕ್ರಮ : ರಾಜ್ಯ ಸರ್ಕಾರ ಎಚ್ಚರಿಕೆ

Spread the love

ಬೆಂಗಳೂರು : ಗ್ರಾಮಪಂಚಾಯಿತಿಗಳಲ್ಲಿ ಸಾರ್ವಜನಿಕರ ಸೇವೆಗಳಿಗೆ ಹಣ ಪಡೆದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ‌ ನೀಡಿದೆ.
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಇಂಟರ್‌ನೆಟ್‌ ಸೌಲಭ್ಯವನ್ನು ಒದಗಿಸಿದರೂ ಕೂಡ ಕೆಲವು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮತ್ತು ಗಣಕಯಂತ್ರ ನಿರ್ವಾಹಕರು ವಿವಿಧ ಸೇವೆಗಳನ್ನು ಖಾಸಗಿ ಇಂಟರ್‌ನೆಟ್‌ ಕೇಂದ್ರಗಳಲ್ಲಿ ನೀಡಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳಿಗೆ ದೂರು ನೀಡಿರುತ್ತಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಲು ಯಡ್ರಾಮಿ ತಾಲೂಕು ಪಂಚಾಯತ್‌ ಅಧಿಕಾರಿಗಳಿಗೆ ಸೂಚಿಸಿರುತ್ತಾರೆ. ಅದರಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಸಾರ್ವಜನಿಕರ ಸೇವೆಗಳನ್ನು ಗ್ರಾಮ ಪಂಚಾಯಿತಿಯ ಕಾರ್ಯಾಲಯದಲ್ಲಿ ಮಾತ್ರ ನೀಡತಕ್ಕದ್ದು. ಒಂದು ವೇಳೆ ಇಂತಹ ಸೇವೆಗಳನ್ನು ಖಾಸಗಿ ಕೇಂದ್ರಗಳಲ್ಲಿ ನೀಡಿ ಹಣ ವಸೂಲಾತಿ ಮಾಡಿರುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಯಡ್ರಾಮಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.