ಶಿರೂರ ಗುಡ್ಡ ಕುಸಿತ : ಕಾರ್ಯಾಚರಣೆ ಆರಂಭಿಸಿದ ಹೈಟೆಕ್ ಡ್ರೋನ್…..

Spread the love

ಕಾರವಾರ : ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದ ಪ್ರದೇಶದಲ್ಲಿ ಡ್ರೋನ್ ಕಾರ್ಯಾಚರಣೆ ಆರಂಭವಾಗಿದೆ. ಅಡ್ವಾನ್ಸ್ಡ್ ಡ್ರೋನ್ ಬೆಸ್ಟ್ ಇಂಟೆಲಿಜೆಂಟ್ ಅಂಡರ್ ಗ್ರೌಂಡ್ಡ್ ಬರ್ಡ್ ಆಬ್ಜೆಕ್ಟ್ ಡಿಟೆಕ್ಟರ್ ಎಂಬ ಡ್ರೋನ್ ಕಾರ್ಯಾಚರಣೆ ನಡೆಸುತ್ತಿದೆ. 

ಗುರುವಾರ ಮಧ್ಯಾಹ್ನ ಪ್ರಾರಂಭವಾದ ಡ್ರೋನ್ ಕಾರ್ಯಾಚರಣೆ ಬಹುತೇಕ ನಾಪತ್ತೆಯಾಗಿರುವ ಮೃತದೇಹವನ್ನು ಶೋಧ ಮಾಡುವ ಸಾಮರ್ಥ್ಯ ಹೊಂದಿದೆ.
ನೌಕಾದಳ ಹಾಗೂ ಭಾರತೀಯ ಭೂಸೇನೆ ಜಂಟಿಯಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದು,ದೆಹಲಿಯಿಂದ ರೈಲಿನ ಮೂಲಕ ಡ್ರೋನ್ ತರಿಸಿಕೊಂಡಿದ್ದು, ಇದು 2.4 ಕಿ.ಮೀ ಎತ್ತರದಲ್ಲಿ ಹಾರಾಡಬಲ್ಲ, ಮಣ್ಣಿನಲ್ಲಿ 20 ಮೀಟರ್ ಮತ್ತು ನೀರಿನಲ್ಲಿ 70 ಮೀಟರ್ ಆಳದವರೆಗೂ ಪರೀಕ್ಷೆ ನಡೆಸಬಲ್ಲ ಡ್ರೋಣ್ ಆಗಿದೆ. ಹಿಮ, ನೀರು, ಬಂಡೆ ಮತ್ತು ಮರುಭೂಮಿಗಳಲ್ಲೂ ಪತ್ತೆ ಕಾರ್ಯಕ್ಕೆ ಈ ಡ್ರೋನ್ ಬಳಕೆಯಾಗುತ್ತದೆ. ಈ ಸಾಧನವನ್ನು ಇಬ್ಬರು ತರಬೇತಿ ಪಡೆದ ಸೈನಿಕರು ನಿರ್ವಹಿಸುತ್ತಾರೆ. 

ಭಾರೀ ಪ್ರವಾಹಗಳು ಮತ್ತು ಹಿಮಕುಸಿತಗಳು ಸಂಭವಿಸಿದ ಸ್ಥಳಗಳಲ್ಲಿ ಇದನ್ನು ಮುಖ್ಯವಾಗಿ ಬಳಸಲಾಗುತ್ತದೆ. ನೆಲದಡಿಯಲ್ಲಿ ಮಾನವ ಉಪಸ್ಥಿತಿಯನ್ನು ಕೂಡ ಇದರಿಂದ ಕಂಡುಹಿಡಿಯಬಹುದು. ಮೃತದೇಹ ಪತ್ತೆ ಕಾರ್ಯಾಚರಣೆಗೂ ಸಹಕಾರಿಯಾಗಲಿದೆ. ಭೂಮಿ ಆಳದ‌ ಗಣಿ ಪತ್ತೆಯನ್ನೂ ಮಾಡಬಹುದು. ರಕ್ಷಣಾ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲ ಈ ಡ್ರೋಣನ್ನು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ, ಭಾರೀ ಮಳೆ ಮತ್ತು ಗಂಟೆಗೆ 40 ಕಿ.ಮೀ.ವರೆಗಿನ ಗಾಳಿಯ ವೇಗದಲ್ಲೂ ಬಳಸಬಹುದು ಎನ್ನಲಾಗಿದೆ.