@ ರಾಜಶೇಖರ ನಾಯ್ಕ
12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಕ್ರಾಂತಿಯಾಗಿ ಬಸವಣ್ಣನವರು ಕೂಡಲ ಸಂಗಮಕ್ಕೆ ಹೋದರು. ಬಸವಣ್ಣನವರ ಅಳಿಯ ಚನ್ನಬಸವಣ್ಣ, ಅಕ್ಕ ನಾಗಲಾಂಬಿಕೆ ಹಾಗೂ ಇತರ ಶರಣರ ದಂಡು ಕಟ್ಟಿಕೊಂಡು ಸುರಕ್ಷಿತ ಜಾಗ ಹುಡುಕಿ ಹೊರಟರು.
ಶರಣರು ರಚಿಸಿದ ವಚನ ಸಾಹಿತ್ಯ ದ ಗಂಟುಗಳು ಈ ಶರಣರ ಹೆಗಲ ಮೇಲಿದ್ದವು. ಮುಂದಿನ ಪೀಳಿಗೆಗೆ ವಚನ ಸಾಹಿತ್ಯವನ್ನು ಸುರಕ್ಷಿತವಾಗಿ ತಲುಪಿಸುವ ಉದ್ದೇಶದಿಂದ ಹೊರಟ ಇವರು ತಲುಪಿದ್ದು ದೂರದ ಗೋವಾ ಬಳಿಯ ಕಾಡಿನ ಬೆಟ್ಟದ ಹತ್ತಿರ ಬಂದು ಉಳಿದುಕೊಂಡರು. ಬಿಜ್ಜಳನ ಸೈನಿಕರ ಜೊತೆ ಹೊಡೆದಾಡುತ್ತಲೇ ಈ ಜಾಗಕ್ಕೆ ಅವರು ಬಂದು ಮುಟ್ಟಿದ್ದರು. ಅಲ್ಲೇ ಲಿಂಗೈಕ್ಯರಾದರು. ಅಲ್ಲಿಯೇ ಚನ್ನಬಸವಣ್ಣನವರ ಸಮಾಧಿಯನ್ನು ಕಟ್ಟಲಾಗಿದೆ.
ಚನ್ನಬಸವಣ್ಣನ ತಾಯಿ ಮತ್ತು ಬಸವಣ್ಣನ ಸೋದರಿ ಅಕ್ಕ ನಾಗಲಾಂಬಿಕೆ ಹೆಸರಿನಲ್ಲಿರುವ ಗುಹೆಯು ಈ ಪವಿತ್ರ ಸಮಾಧಿಗೆ ಹತ್ತಿರದಲ್ಲಿ ಇದೆ. ಶರಣರು ಬಂದು “ಉಳಿ”ದುಕೊಂಡದ್ದರಿಂದ ಈ ಸ್ಥಳವು “ಉಳವಿ” ಅಂತ ಆಯಿತು. ಈ ಕ್ಷೇತ್ರವು ಇಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ಇಲ್ಲಿ ಪ್ರಖ್ಯಾತ ಚನ್ನಬಸವೇಶ್ವರ ದೇವಾಲಯವನ್ನು ನಿರ್ಮಿಸಲಾಗಿದೆ.