ಮಿಸ್ಟರ್ ದೇವೇಗೌಡ, ನಿಮ್ಮನ್ನ ಸಿಎಂ ಮಾಡಿದ್ದು ಯಾರು? – ಮೇಕೆದಾಟುಗಾಗಿ ಮೋದಿಯನ್ನ ಹಾಡಿ ಹೊಗಳ್ತೀರಿ – ಸಿಎಂ ವಾಗ್ದಾಳಿ

Spread the love

ರಾಮನಗರ: ದ್ವೇಷದ ರಾಜಕಾರಣ ಮಾಡೋದ್ರಲ್ಲಿ ದೇವೇಗೌಡರು ನಂಬರ್ 1. ಉಸಿರಿರುವ ವರೆಗೆ ಮೇಕೆದಾಟು ಮಾಡ್ತೇನೆ ಅಂದಿದ್ದಾರೆ, ಮಿಸ್ಟರ್ ದೇವೇಗೌಡ, ನಿಮ್ಮನ್ನ ಸಿಎಂ ಮಾಡಿದ್ದು ಯಾರು? ಮೇಕೆದಾಟು ಮಾಡಿಸಲು ಮೋದಿಯನ್ನ ಹಾಡಿ ಹೊಗಳ್ತೀರಿ. ಇದೇ 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಬಗ್ಗೆ ಏನು ಹೇಳಿದ್ರು? ಕುಮಾರಸ್ವಾಮಿ ಮೋದಿಯಂತಹ ಸುಳ್ಳುಗಾರ ಇಲ್ಲ ಅಂತ ಹೇಳಿದ್ದರು. ದೇವೇಗೌಡರು ಮೋದಿ ಯಾವುದೇ ಕಾರಣಕ್ಕೂ ಪ್ರಧಾನಿ ಆಗಲ್ಲ, ಒಂದು ವೇಳೆ ಪ್ರಧಾನಿ ಆದ್ರೆ ದೇಶ ಬಿಡ್ತಿನಿ ಅಂದರು, ಬಿಟ್ರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈತ್ರಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಇವತ್ತು ಪ್ರಚಾರದ ಕೊನೆಯ ದಿನದ ಭಾಗವಾಗಿ ಚನ್ನಪಟ್ಟಣದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಇಷ್ಟು ಸಂಖ್ಯೆಯಲ್ಲಿ ಜನ ಸೇರಿರೋದು ನೋಡಿದ್ರೆ ಯೋಗೆಶ್ವರ್ ಗೆಲ್ಲುವ ವಿಶ್ವಾಸ ಬಂದಿದೆ. ಸೂರ್ಯ, ಚಂದ್ರ ಹುಟ್ಟೋದು ಎಷ್ಟು ಸತ್ಯವೋ ಯೋಗೆಶ್ವರ್ ಗೆಲುವು ಕೂಡಾ ಅಷ್ಟೇ ಸತ್ಯ. ಈ ಕ್ಷೇತ್ರದ ಜನರಿಗೆ ಅರ್ಥ ಆಗಿದೆ. ಯಾರು ಜನರ ಜೊತೆ ಇರ್ತಾರೆ? ಯಾರು ಅಭಿವೃದ್ಧಿ ಮಾಡ್ತಾರೆ ಅಂತ ಗೊತ್ತಿದೆ. ಯೋಗೇಶ್ವರ್ 5 ಬಾರಿ ಶಾಸಕರಾಗಿದ್ದವರು. ಅವರು ಶಾಸಕರಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅವರನ್ನ ಆಧುನಿಕ ಭಗೀರಥ ಅಂತ ಕರೀತಾರೆ. ಕೆರೆಗಳಿಗೆ ನೀರು ತುಂಬಿಸಿ ರೈತರಿಗೆ ಸಹಾಯ ಮಾಡಿದ್ದಾರೆ. ನಾನು 6ನೇ ತಾರೀಖು ಬಂದಾಗ ಎಲ್ಲಾ ಕಡೆ ಹಸಿರು, ಹೈನುಗಾರಿಕೆ ಆಗ್ತಿದೆ. ಅದಕ್ಕೆ ಯೋಗೆಶ್ವರ್ ಹೇಳಿದ್ರು ಕೆರೆಗಳಿಗೆ ನೀರು ತುಂಬಿಸಿದ್ದೇನೆ ಅಂದ್ರು. ಹಾಗಾಗಿ ಈ ಕ್ಷೇತ್ರ ಎಲ್ಲಾ ಕಡೆ ಹಸಿರಾಗಿ ಕಾಣುತ್ತೆ ಎಂದು ಯೋಗೇಶ್ವರ್‌ ಪರ ಬ್ಯಾಟ್‌ ಬೀಸಿದರು.