ಶಿರಸಿ : ರಾಜ್ಯದ 3,800 ದಾಖಲೆ ರಹಿತ ವಸತಿ ಪ್ರದೇಶಗಳನ್ನು 6 ತಿಂಗಳಲ್ಲಿ ಕಂದಾಯ ಗ್ರಾಮಗಳೆಂದು ಘೋಷಿಸಲಾಗುವುದು. ಆ ಗ್ರಾಮಗಳಲ್ಲಿ ವಾಸಿಸುವ 1.50 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಶಿರಸಿಯ ಅಂಬೇಡ್ಕರ್ ಭವನದಲ್ಲಿ ಬುಧವಾರ ಅವರು ಅರ್ಹ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಬಗರ್ ಹುಕುಂ ಸಾಗುವಳಿ ಚೀಟಿ, ಪಹಣಿ ಪತ್ರಿಕೆ, ಪೋಡಿ ದಾಖಲೆ ಮತ್ತು ಕಂದಾಯ ಗ್ರಾಮಗಳ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಬಗರ್ ಹುಕುಂ ಅಡಿ ಲಕ್ಷಾಂತರ ಅರ್ಜಿಗಳು ಬಂದಿವೆ. ಇಲಾಖೆಯು ಆಂದೋಲನದ ರೀತಿ ಅಂಥ ಅರ್ಜಿ ವಿಲೇವಾರಿ ಮಾಡಿ, ಮಾನದಂಡದ ಪ್ರಕಾರ ಅರ್ಹರಿಗೆ ಹಕ್ಕುಪತ್ರ ನೀಡಲಿದೆ. ರಾಜ್ಯದಲ್ಲಿನ ವಿವಿಧ ಪ್ರದೇಶದ ತಾಂಡಾಗಳು, ಹಟ್ಟಿಗಳು, ಕ್ಯಾಂಪ್‌ಗಳಿಗೆ ಅಧಿಕೃತ ಮಾನ್ಯತೆ ಇಲ್ಲದ ಕಾರಣ ಅವುಗಳಿಗೆ ಕಂದಾಯ ಗ್ರಾಮದ ಅಧಿಕಾರ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಅವರು ತಿಳಿಸಿದರು.
ಹಕ್ಕುಪತ್ರ ಮಂಜೂರಿ ನಿಯಮ ಬಿಗಿ ಮಾಡಲಾಗಿದ್ದು, ಅರ್ಜಿದಾರರ ಹೆಸರಲ್ಲಿ ಜಮೀನು ಇದೆಯೇ? ಸಾಗುವಳಿ ನಡೆದಿದೆಯೇ ಎಂಬುದನ್ನು ಖಾತ್ರಿ ಮಾಡಲಾಗುತ್ತದೆ. ಬಗರ್ ಹುಕುಂ ಸಮಿತಿಗಳ ನಡಾವಳಿಗಳನ್ನು ಡಿಜಿಟಲೀಕರಣ ಮಾಡಲಾಗುತ್ತದೆ. ಇದರ ಜತೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅರ್ಹರಿಗೆ ಜಮೀನು ನೋಂದಣಿ ಮಾಡಿ ಕೊಡಲಾಗುತ್ತದೆ. ಇದರಿಂದ ಅರ್ಹರಿಗೆ ಜಮೀನು ಸಿಗಲು ಸಾಧ್ಯ ಎಂದು ಹೇಳಿದಮಂಕಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಅಡಿಕೆ ಬಾಗಾಯ್ತಗಳಿಗೆ ಬಿಟ್ಟ ಬೆಟ್ಟ ಭೂಮಿ ‘ಬ’ ಖರಾಬ್ ಮಾಡಲಾಗಿದ್ದು, ಅದನ್ನು ಈ ಹಿಂದಿನಂತೆ ಮುಂದುವರಿಸಬೇಕು. ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಿಸಲು ಜಾಗ ಇಲ್ಲದಿರುವವರಿಗೆ ಕಂದಾಯ ಜಾಗ ನೀಡುವ ಕಾರ್ಯ ಆಗಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಶಿವರಾಮ ಹೆಬ್ಬಾರ್, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಇದ್ದರು.