ರಾಜ್ಯ ಸರ್ಕಾರದಿಂದ `ನಕಲಿ ಕ್ಲಿನಿಕ್’ಗಳ ವಿರುದ್ಧ ಕಠಿಣ ಕ್ರಮ : ಪ್ರತಿ ಜಿಲ್ಲೆಗೊಂದು ಸಮಿತಿ ರಚನೆ.!

Spread the love

ಬೆಳಗಾವಿ : ರಾಜ್ಯದಲ್ಲಿ ಕ್ಲಿನಿಕ್ ಗಳನ್ನು ಪ್ರಾರಂಭಿಸಲು ಕೆಪಿಎಂಇ ತಿದ್ದುಪಡಿ ಅಧಿನಿಯಮ – 2017, ಕಲಂ 5ರಂತೆ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸಿ, ನಿಯಾಮಾನುಸಾರ ಕೆಪಿಎಂಇ ನೋಂದಣಿ ಪ್ರಮಾಣಪತ್ರವನ್ನು ಪಡೆದು ಖಾಸಗಿ ವೈದ್ಯಕೀಯ ಸಂಸ್ಥೆಯನ್ನು ಪ್ರಾರಂಭಿಸಬಹುದಾಗಿರುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಸದರಿ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲು ಕೆಪಿಎಂಇ ಅಧಿನಿಯಮ 2007, ಕಲಂ 4ರ ಅನ್ವಯ ನೊಂದಣಿ ಮತ್ತು ಕುಂದುಕೊರತೆ ಪ್ರಾಧಿಕಾರವಾಗಿ ಪ್ರತಿಯೊಂದು ಜಿಲ್ಲೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದೆ.

ಈ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು (ಸಮಿತಿಯ ಸದಸ್ಯ ಕಾರ್ಯದರ್ಶಿಗಳು) ಹಾಗೂ ಸಮಿತಿಯ ಇತರೆ ಸದಸ್ಯರಾದ ಜಿಲ್ಲಾ ಆಯುಷ್ ಅಧಿಕಾರಿ, ಭಾರತೀಯ ವೈದ್ಯಕೀಯ ಸಂಘದಿಂದ ಓರ್ವ ಸದಸ್ಯರು ಮತ್ತು ಓರ್ವ ಮಹಿಳಾ ಪ್ರತಿನಿಧಿಯನ್ನೊಳಗೊಂಡಿರುತ್ತದೆ.

ಜನವರಿ 2021 ರಿಂದ ಇಲ್ಲಿಯವರೆಗೆ ಕೋಲಾರ ಜಿಲ್ಲೆಯಲ್ಲಿ 134 ನಕಲಿ ವೈದ್ಯರ ಕ್ಲಿನಿಕ್‌ಗಳನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 16 ಕ್ಲಿನಿಕ್‌ಗಳನ್ನು ಜಪ್ತಿ ಮಾಡಲಾಗಿದೆ. 8 ಪಿಸಿಆರ್ ಪ್ರಕರಣಗಳು ದಾಖಲಾಗಿವೆ. 1 ಪ್ರಕರಣಕ್ಕೆ ಎಫ್.ಐ.ಆರ್ ದಾಖಲಾಗಿದ್ದು, 7 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಮತ್ತು ಈವರೆಗೆ 102 ಕ್ಲಿನಿಕ್‌ಗಳನ್ನು ಮುಚ್ಚಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.