“ನಾನು ಮನಮೋಹನ್ ಸಿಂಗ್‌ ದೊಡ್ಡ ಅಭಿಮಾನಿ” ಎಂದಿದ್ದರು ಒಬಾಮಾ..!

Spread the love

ವಿಶೇಷ ವರದಿ : ರಾಜಶೇಖರ ನಾಯ್ಕ
ಮಾಜಿ ಪಿಎಂ ಮನಮೋಹನ ಸಿಂಗ್ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಸ್ನೇಹ ಬಹಳ ವಿಶೇಷವಾಗಿತ್ತು. ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಒಬಾಮಾ ಅಮೆರಿಕದ ಅಧ್ಯಕ್ಷರಾಗಿದ್ದರು. ಆ ವೇಳೆ, ಅಂದರೆ 2008ರಲ್ಲಿ, ಅಮೆರಿಕದಲ್ಲಿ ಮಹಾನ್ ಆರ್ಥಿಕ ಕುಸಿತ ಸಂಭವಿಸಿತ್ತು. ಅದರ ಪರಿಣಾಮ ಭಾರತದ ಮೇಲೂ ಆಗಿತ್ತು. ಆದರೆ ಭಾರತಕ್ಕೆ ಹೆಚ್ಚು ನಷ್ಟವಾಗದಂತೆ ಮನಮೋಹನ್ ಸಿಂಗ್ ತೆಗೆದುಕೊಂಡ ಕ್ರಮ ಒಬಾಮಾ ಅವರನ್ನು ಆಶ್ಚರ್ಯಚಕಿತರನ್ನಾಗಿಸಿತ್ತು.

ಒಬಾಮಾ ಜೊತೆಗೆ ಐತಿಹಾಸಿಕ ಭಾರತ-ಅಮೆರಿಕ ಅಣು ಒಪ್ಪಂದ ಮಾಡಿಕೊಳ್ಳುವಲ್ಲಿ ಮನಮೋಹನ ಸಿಂಗ್ ಯಶಸ್ವಿಯಾಗಿದ್ದರು. ಈ ಮೂಲಕ ಇಬ್ಬರಲ್ಲೂ ವೈಯಕ್ತಿಕ ಬಾಂಧವ್ಯ ಬೆಳೆದಿತ್ತು. ಈ ಒಪ್ಪಂದವು 2008 ರಲ್ಲಿ ಜಾರಿಗೆ ಬಂತು. ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಕೆಲವರ ಆರಂಭಿಕ ಅಸಮ್ಮತಿಯ ನಡುವೆ ಮನಮೋಹನ್ ಸಿಂಗ್ ಇದನ್ನು ಸಮರ್ಥವಾಗಿ ನಿಭಾಯಿಸಿದ್ದರು. ಈ ಒಪ್ಪಂದವು 1998 ರ ಪೋಖ್ರಾನ್ 2 ಪರಮಾಣು ಪರೀಕ್ಷೆಗಳ ನಂತರ IAEA (The International Atomic Energy Agency) ಯ ಭಾಗಶಃ ನಿರ್ಬಂಧಗಳೊಂದಿಗೆ ಭಾರತದ ಮೇಲೆ ವಿಧಿಸಲಾದ ನಿರ್ಬಂಧಗಳ ಯುಗವನ್ನು ಕೊನೆಗೊಳಿಸಿತು. 

ಸಿಂಗ್‌ ಅವರನ್ನು ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಞರಲ್ಲಿ ಒಬ್ಬರು ಎಂದು ಒಬಾಮಾ ಅವರು ಸಿಂಗ್‌ರನ್ನು ಗೌರವಿಸುತ್ತಿದ್ದರು. ಸಮಾರಂಭವೊಂದರಲ್ಲಿ ಮಾತನಾಡುವಾಗ ಒಬಾಮಾ, ‘ನಾನು ಸಿಂಗ್ ಅವರ ದೊಡ್ಡ ಅಭಿಮಾನಿ. ಅವರು ಭಾರತದ ಆರ್ಥಿಕತೆಗೆ ಅಡಿಪಾಯ ಹಾಕಿದವರು’ ಎಂದು ಹಾಡಿ ಹೊಗಳಿದ್ದರು.