
ಹೊನ್ನಾವರ : ನೈಸರ್ಗಿಕ ಶ್ರೀಮಂತ ಮತ್ತು ರಾಷ್ಟೀಯ ಯೋಜನೆಗೆ ತ್ಯಾಗ ಮಾಡಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂದಾಯ ಮತ್ತು ಅರಣ್ಯ ಭೂಮಿಯಲ್ಲಿನ ವಾಸ್ತವ್ಯ ಮತ್ತು ಸಾಗುವಳಿದಾರರ ಸುಮಾರು ೧,೫೮,೬೧೩ ಕುಟುಂಬಗಳು ಭೂಮಿ ಹಕ್ಕಿನಿಂದ ವಂಚಿತರಾಗುವ ಭೀತಿ ಎದುರುಸಿದ್ದು, ಈ ಹಿನ್ನಲೆಯಲ್ಲಿ ಗಂಭೀರ ಚಿಂತನೆ ಅವಶ್ಯ ಎಂದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅವರು ಹೊನ್ನಾವರ ತಾಲೂಕಿನ ನಾಮಧಾರಿ ಸಂಭಾಗಣ ಮಂಟಪದಲ್ಲಿ ಅರಣ್ಯವಾಸಿಗಳ ಗ್ರೀನ್ ಕಾರ್ಡ ಪ್ರಮುಖರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಇಂದು ಫೆ.೮ ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕಂದಾಯ ಕಾಯಿದೆ ೧೯೬೪ ರ ವಿವಿಧ ನಮೂನೆಯಲ್ಲಿ ಮತ್ತು ಅರಣ್ಯ ಹಕ್ಕು ಕಾಯಿದೆಯ ಅಡಿಯಲ್ಲಿ ವಾಸ್ತವ್ಯ ಮತ್ತು ಸಾಗುವಳಿಗಾಗಿ ಅರ್ಜಿ ಸಲ್ಲಿಸಿದ ಪ್ರಗತಿ ಪಟವನ್ನ ಪ್ರದರ್ಶಿಸುತ್ತ ಮೇಲಿನಂತೆ ಹೇಳಿದರು.

ಜಿಲ್ಲೆಯು ಪ್ರಮುಖ ಐದು ಜಲ ವಿದ್ಯುತ ಯೋಜನೆ, ಕೈಗಾ ಅಣುಸ್ಥಾವರ, ಸೀಬರ್ಡ, ರೈಲ್ವೆ, ಪ್ರಾಯೋಜಿತ ವಿಮಾನ ನಿಲ್ದಾಣ, ಸಿ ಆರ್ ಜಡ್, ಅಭಿಯಾರಣ್ಯ, ಹುಲಿ ಸಂರಕ್ಷಣಾ ವಲಯ ಮುಂತಾದ ರಾಷ್ಟೀಯ ಯೋಜನೆಗಳಿಗೆ ತ್ಯಾಗ ಮಾಡಿದ ಶ್ರೀಮಂತ ಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಅರಣ್ಯ ಮತ್ತು ಕಂದಾಯ ಜಮೀನಿನಲ್ಲಿ ವಾಸ್ತವ್ಯ ಮತ್ತು ಸಾಗುವಳಿಗಾಗಿ ಅವಂಲಬಿತರಾಗಿರುವ ಒಂದುವರೆ ಲಕ್ಷಕ್ಕೂ ಮಿಕ್ಕಿ ಕುಟುಂಬಗಳು ಭೂಮಿ ಮಂಜೂರಿಗೆ ಕಾನೂನಿನಿಂದ ಅನಾರ್ಹತೆಗೊಂಡು ಒಕ್ಕಲೇಬ್ಬಿಸುವ ಜೊತೆಯಲ್ಲಿ ನಿರಾಶ್ರಿತರಾಗುವ ಭೀತಿಯನ್ನು ಎದುರಿಸುತ್ತಿರುವ ಸಂದರ್ಭ ಬಂದಿರುವುದು ವಿಷಾದಕರ ಎಂದು ಅವರು ಹೇಳಿದರು.
ಕಂದಾಯದ ವಿವಿಧ ಕಾನನೂನಿನಲ್ಲಿ ವಸತಿ ಮತ್ತು ಸಾಗುವಳಿಗಾಗಿ ನಗರ ಮತ್ತು ಗ್ರಾಮೀಣ ಭಾಗದಿಂದ ಒಟ್ಟು ೭೩,೭೨೫ ಅರ್ಜಿಗಳು ತಿರಸ್ಕಾರವಾಗಿದ್ದು ಇರುತ್ತದೆ. ಅವುಗಳಲ್ಲಿ ಕೇವಲ ೬,೪೮೯ ಕಂದಾಯ ಭೂಮಿ ಹಕ್ಕು ಪತ್ರ ದೊರಕಿರುವುದು ಎಂದು ಅವರು ಹೇಳುತ್ತಾ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ೮೫೮೧೯ ಅರ್ಜಿಗಳಲ್ಲಿ ೨,೮೫೨ ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ ಎಂದು ಹೋರಾಟಗಾರರ ವೇದಿಕೆಗೆ ದೊರಕಿರುವ ಸರ್ಕಾರಿ ದಾಖಲೆಯನ್ನು ಉಲ್ಲೇಖಿಸಿ ಹೇಳಿದರು.

ಸಂಚಾಲಕರಾದ ಮಹೇಶ ನಾಯ್ಕ ಕಾನಕ್ಕಿ, ನಗರ ಅಧ್ಯಕ್ಷ ಸುರೇಶ ಮೇಸ್ತಾ, ಜಿಲ್ಲಾ ಸಂಚಾಲಕ ರಾಮ ಮರಾಠಿ, ಗಿರೀಶ ನಾಯ್ಕ ಚಿತ್ತಾರ, ವಿನೋದ ನಾಯ್ಕ, ದಾವುದ್, ರಫೀಕ ಪ್ರಭಾತನಗರ, ಜನಾರ್ಧನ ನಾಯ್ಕ, ಗಣೇಶ ನಾಯ್ಕ, ಮಾರುತಿ ಆರ್ ನಾಯ್ಕ ಉಪಸ್ಥಿತರಿದ್ದರು.

ವಿವಿಧ ಕಾನೂನಿನಲ್ಲಿ ಅರ್ಜಿ:
ಭೂಕಂಧಾಯ ಕಾಯಿದೆ ನಮೂನೆ ೫೭ (೧೮೪೨), ಗ್ರಾಮೀಣ (೯೬೫೧), ನಮೂನೆ ೫೩ (೨೬,೨೫೮), ನಮೂನೆ ೫೦ (೩೯,೦೧೬) ನಗರ ಅತಿಕ್ರಮಣ ೫,೩೬೮ ಕಂದಾಯ ಭೂಮಿಗೆ ಅರ್ಜಿ ಸಲ್ಲಿಸಿದ್ದರೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ೮೫೮೧೯-ಹೀಗೆ ಒಟ್ಟು ಭೂಮಿಗಾಗಿ ೧,೬೭,೯೫೪ ಕುಟುಂಬಗಳು ಭೂಮಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದು ಅವುಗಳಲ್ಲಿ ಕಂದಾಯ ಮತ್ತು ಅರಣ್ಯ ಭೂಮಿ ಹಕ್ಕು ದೊರಕಿರುವದು ೯,೩೪೧ ಕುಟುಂಬಗಳಿಗೆ ಮಾತ್ರ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.