Headlines

ನಾನು ಹಿಂದೂ ದೇವತೆಗಳಿಗೆ ಅಪಮಾನ ಮಾಡಿಲ್ಲ, ಆ ಬಗ್ಗೆ ರಾಜ್ಯದ ಜನತೆ ಕ್ಷಮೆ ಕೋರುವೆ – ಸಚಿವ ಮುರುಗೇಶ್ ನಿರಾಣಿ

Spread the love

ಬೆಂಗಳೂರು : ಹಿಂದೂ ಧರ್ಮ ಮತ್ತು ಆಚಾರ-ವಿಚಾರದಲ್ಲಿ ಅಪಾರ ಗೌರವ ಇಟ್ಟುಕೊಂಡಿದ್ದೇನೆ. ಯಾವುದೇ ಸಂದರ್ಭದಲ್ಲಿಯೂ ನಾನು ಹಿಂದೂ ಧರ್ಮಕ್ಕಾಗಲೀ, ದೇವತೆಗಳ ಬಗ್ಗೆಯಾಗಲೀ ಅಪಮಾನ ಮಾಡುವ ಕೆಲಸ ಮಾಡೋದಿಲ್ಲ. ಅಂದು ಅಚಾತುರ್ಯದಿಂದ ನಡೆದಂತ ಪ್ರಮಾದವಾಗಿದೆ. ಅಂದೇ ಆ ಬಗ್ಗೆ ರಾಜ್ಯದ ಜನತೆಯ ಕ್ಷಮೆ ಕೋರಿದ್ದೇನೆ ಎಂಬುದಾಗಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟ ಪಡಿಸಿದ್ದಾರೆ.

ಸಚಿವ ಮುರುಗೇಶ್ ನಿರಾಣಿ ವಿರುದ್ಧ ವ್ಯಕ್ತಿಯೊಬ್ಬರು ಹಿಂದೂ ದೇವತೆಗಳಿಗೆ ಅಪಮಾನ ಕುರಿತಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದಂತ ನ್ಯಾಯಪೀಠವು, ತನಿಖೆಗೆ ಕೂಡಿಗೆಹಳ್ಳಿ ಪೊಲೀಸರಿಗೆ ಸೂಚಿಸಿತ್ತು. ಹೀಗಾಗಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಲಿದೆ ಎಂದೇ ಹೇಳಲಾಗುತ್ತಿತ್ತು.

ಈ ಕುರಿತಂತೆ ಮಾತನಾಡಿದಂತ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು, ವಾಟ್ಸಾಪ್ ಗ್ರೂಗೆ ಕಣ್ತಪ್ಪಿನಿಂದ ಯಾರೋ ಕಳುಹಿಸಿದಂತ ಸಂದೇಶವನ್ನು ಮರು ಫಾರ್ವರ್ಡ್ ಮಾಡಲಾಗಿತ್ತು. ಈ ಅಚಾತುರ್ಯ ತಮ್ಮ ಗಮನಕ್ಕೆ ಅಂದು ಬಂದ ಕೂಡಲೇ, ಆ ಸಂದೇಶವನ್ನು ಡಿಲೀಟ್ ಮಾಡಿದ್ದೆ. ಅಲ್ಲದೇ ಅಂದೇ ರಾಜ್ಯದ ಜನತೆಯ ಕ್ಷಮೆ ಕೇಳಿದ್ದೆನು ಎಂದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಹಿಂದೂ ಧರ್ಮ, ಆಚಾರ-ವಿಚಾರದ ಬಗ್ಗೆ, ದೇವರ ಬಗ್ಗೆ ಅಪಾರವಾದಂತ ಗೌರವ ಇಟ್ಟುಕೊಂಡಿದ್ದೇನೆ. ಯಾವುದೇ ಸಂದರ್ಭದಲ್ಲಿಯೂ ಹಿಂದೂ ಧರ್ಮ, ದೇವತೆಗಳ ಬಗ್ಗೆ ಅಪಮಾನ ಮಾಡುವಂತ ಕೆಲಸ ಮಾಡೋದಿಲ್ಲ. ಅಂದು ನಡೆದದ್ದು ಅಚಾತುರ್ಯದಿಂದ ಆಗಿದೆ. ಕೋರ್ಟ್ ಆದೇಶ ಪಾಲಿಸುತ್ತೇನೆ. ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕಾರ ಕೊಡುವುದಾಗಿ ಹೇಳಿದರು.