Headlines

ಎಷ್ಟೇ ಪ್ರಯತ್ನಿಸಿದರೂ ಆನ್​ಲೈನ್​ನಲ್ಲಿ ಉತ್ತಮ ಶಿಕ್ಷಣ ಕೊಡಲಾಗಲಿಲ್ಲ: ಶಿಕ್ಷಣ ಸಚಿವ ಬಿ ಸಿ ನಾಗೇಶ್

Spread the love

ತುಮಕೂರು : ಕಳೆದ 1 ವರ್ಷದಿಂದ ಎಷ್ಟೇ ಪ್ರಯತ್ನ ಪಟ್ಟರೂ ಆನ್​ಲೈನ್​ನಲ್ಲಿ ಉತ್ತಮ ಶಿಕ್ಷಣ ಕೊಡಲು ಸಾಧ್ಯವಾಗಲಿಲ್ಲ. ಹೀಗೆ ಉತ್ತಮ ಶಿಕ್ಷಣ ಕೊಡಲು ಸಾಧ್ಯವಾಗದಿರಲು ಬೇರೆ ಬೇರೆ ಕಾರಣಗಳಿವೆ. ಸದ್ಯ ರಾಜ್ಯದಲ್ಲಿ ಕೊವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಿದೆ. ಈ ಎಲ್ಲ ಕಾರಣಗಳಿಂದ ಶಾಲಾ ಕಾಲೇಜು ಆರಂಭಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಸ್ಪಷ್ಟಪಡಿಸಿದರು.

ಮಕ್ಕಳು ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯ. ಒತ್ತಾಯಪೂರ್ವಕವಾಗಿ ವಿದ್ಯಾರ್ಥಿಗಳು ಶಾಲೆಗೆ ಬರುವಂತಿಲ್ಲ. ಮುಂದೆಯೂ ಆನ್ಲೈನ್, ಆಫ್ಲೈನ್ ಎರಡರಲ್ಲೂ ತರಗತಿ ನಡೆಯಲಿದೆ ಎಂದು ತುಮಕೂರಿನ ಸಿದ್ದಾರ್ಥ ಪ್ರೌಢಶಾಲೆಗೆ ಶಾಲೆ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಪರಿಶೀಲನೆಗೆ ಆಗಮಿಸಿದ್ದ ಅವರು ತಿಳಿಸಿದರು.

ಈಮುನ್ನ ಕೊವಿಡ್ ಮೂರನೇ ಅಲೆ ಮಕ್ಕಳಿಗೆ ಕಂಟಕವಾಗಲಿದೆ ಎಂಬ ಮಾತಿತ್ತು. ಆದರೆ ಈಗ ಒಂದು ತಿಂಗಳಿಂದ ಎಲ್ಲಾ ತಜ್ಞರು ಮಕ್ಕಳ ಮೇಲೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೋಂಕು ತಗುಲಿದರು ಪ್ರಾಣ ಹಾನಿಯಾಗುವುದಿಲ್ಲ ಎಂದು ಅವತು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ಹಂತದಲ್ಲಿ 1 ರಿಂದ 8ನೇ ತರಗತಿವರೆಗೂ ಶಾಲೆ ತೆರೆಯುವ ಪ್ರಯತ್ನ ಮಾಡುತ್ತೇವೆ‌. ಪಾಸಿಟಿವಿಟಿ ರೇಟ್ ಶೇಕಡಾ 2ಕ್ಕಿಂತ ಹೆಚ್ಚಿದರೆ ಆ ಜಿಲ್ಲೆಯ ಶಾಲೆಗಳನ್ನು ಪ್ರಾರಂಭಿಸುವುದಿಲ್ಲ. ಸದ್ಯ ರಾಜ್ಯದಲ್ಲಿ 5 ಜಿಲ್ಲೆಗಳಲ್ಲಿ ಶಾಲಾ ಕಾಲೇಜು ಪ್ರಾರಂಭ ಮಾಡುತ್ತಿಲ್ಲ ಎಂದು ಅವರು ತಿಳಿಸಿದರು.

ಶಾಲೆಗಳಿಗೆ ಮುಖ್ಯಮಂತ್ರಿ ಭೇಟಿ
ನಾಳೆಯಿಂದ ಶಾಲಾ ಕಾಲೇಜು 9 ರಿಂದ 12 ನೇ ತರಗತಿಗಳ ಭೌತಿಕ ವರ್ಗ ಆರಂಭವಾಗಲಿರುವ ಕಾರಣ ನಾಳೆ ಸಿಎಂ ಬಸವರಾಜ್ ಬೊಮ್ಮಾಯಿ ಶಾಲೆಗಳಿಗೆ ಭೇಟಿ ನೀಡಲಿದ್ದಾರೆ. ಮಲ್ಲೇಶ್ವರಂ ನ 18 ನೇ ಕ್ರಾಸ್ ಸರ್ಕಾರಿ ಪದವಿಪೂರ್ವ ಕಾಲೇಜು, ನಿರ್ಮಲಾರಾಣಿ ಅನುದಾನಿತ ಪ್ರೌಢ ಶಾಲೆ 18 ನೇ ಕ್ರಾಸ್ ನಲ್ಲಿರುವ ಶಾಲೆಗೆ ಸಿಎಂ ಭೇಟಿ ನೀಡಲಿದ್ದಾರೆ. ಸಿಎಂ ಜತೆಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಾಥ್ ಕೊಡಲಿದ್ದಾರೆ.

ಶಾಲೆ ಆರಂಭವಾಗಲಿರುವ 9-12ನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ
ಆಗಸ್ಟ್ 23, ಸೋಮವಾರದಿಂದ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ- ಕಾಲೇಜು ಆರಂಭವಾಗಲಿರುವ (Karnataka School Reopen) ಕಾರಣ ಬಿಎಂಟಿಸಿ ಬಸ್​ಗಳಲ್ಲಿ (BMTC Bus) ವಿದ್ಯಾರ್ಥಿಗಳು ವಾಸಸ್ಥಳದಿಂದ ಶಾಲಾ- ಕಾಲೇಜಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ. 2020-21 ಸಾಲಿನಲ್ಲಿ ವಿತರಣೆ ಮಾಡಿರುವ ಸ್ಮಾರ್ಟ್ ಕಾರ್ಡ್ ವಿದ್ಯಾರ್ಥಿ ಪಾಸ್ ಮತ್ತು ಈ ವರ್ಷದ ಶೈಕ್ಷಣಿಕ ದಾಖಲಾತಿ ಶುಲ್ಕ ಕಟ್ಟಿರುವ ರಶೀದಿ ತೋರಿಸಿ ವಿದ್ಯಾರ್ಥಿಗಳು ಬಿಎಂಟಿಸಿ ವ್ಯಾಪ್ತಿಯ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಅಥವಾ ಶಾಲಾ ಕಾಲೇಜಿನ ಐಡಿ ಕಾರ್ಡ್ ತೋರಿಸಿಯೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಿಎಂಟಿಸಿಯ ಮುಂದಿನ ಆದೇಶದವರೆಗೆ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಒದಗಿಸಲಾಗಿದೆ.