
ಬೆಂಗಳೂರು: ಆಶ್ರಯ ಮನೆಗಳಿಗೆ ಬಡವರು ಅರ್ಜಿ ಸಲ್ಲಿಸಿ ಸರ್ಕಾರದ ಕಡೆ ಮುಖ ಮಾಡಿ ಕಾಯುವುದು ಸಾಮಾನ್ಯ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿನ ನೂತನ ಸಚಿವರು ಸರ್ಕಾರಿ ಮನೆ ಪಡೆಯಲು ಸರ್ಕಸ್ ನಡೆಸುತ್ತಿದ್ದಾರೆ.
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಾಸವಿರುವ ಸರ್ಕಾರಿ ನಿವಾಸವೇ ಬೇಕೆಂದು ನಾಲ್ವರು ಸಚಿವರು ಹಾಗೂ ವಿಧಾನ ಪರಿಷತ್ ಸಭಾಪತಿ ಬೇಡಿಕೆ ಇಟ್ಟಿದ್ದು, ಮಾಜಿ ಸಚಿವ ಜಗದೀಶ್ ಶೆಟ್ಟರ್ ವಾಸವಿದ್ದ ಮನೆ ಮೇಲೆ ಮೂವರು ಕಣ್ಣು ಹಾಕಿದ್ದಾರೆ.
ಶಿವಾನಂದ ವೃತ್ತದ ಗಾಂಧಿ ಭವನದ ಬಳಿ ಇರುವ ಕುಮಾರಕೃಪ ಪೂರ್ವ ಭಾಗದಲ್ಲಿರುವ ನಂಬರ್ 3 ಸರ್ಕಾರಿ ನಿವಾಸವನ್ನು ತಮಗೆ ನೀಡುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಾರಿಗೆ ಸಚಿವ ಶ್ರೀರಾಮುಲು, ಗಣಿ ಸಚಿವ ಹಾಲಪ್ಪ ಆಚಾರ್, ಪ್ರವಾಸೋದ್ಯಮ- ಪರಿಸರ ಸಚಿವ ಆನಂದ್ ಸಿಂಗ್, ಕ್ರೀಡಾ ಸಚಿವ ನಾರಾಯಣಗೌಡ ಡಿಪಿಎಆರ್‌ಗೆ ಬೇಡಿಕೆ ಸಲ್ಲಿಸಿದ್ದಾರೆ.
ಬಿಎಸ್‌ವೈ ಸಂಪುಟದಲ್ಲಿದ್ದ ಸಿ.ಪಿ.ಯೋಗೇಶ್ವರ್, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅವರು ಮಾಜಿಗಳಾಗಿದ್ದು, ಇವರು ಅಧಿಕಾರದಲ್ಲಿದ್ದಾಗ ನೀಡಲಾಗಿದ್ದ ಸರ್ಕಾರಿ ನಿವಾಸಗಳಿಗೆ ಹಾಲಿ ಸಚಿವರು ಬೇಡಿಕೆ ಸಲ್ಲಿಸಿದ್ದಾರೆ. ಶೆಟ್ಟರ್ ವಾಸವಾಗಿರುವ ಕ್ರೆಸೆಂಟ್ ರಸ್ತೆಯ ನಂ. 3 ಮನೆಯನ್ನು ತಮಗೆ ನೀಡುವಂತೆ ಶ್ರೀರಾಮುಲು, ಶಂಕರ ಪಾಟೀಲ್ ಮುನೇನಕೊಪ್ಪ ಹಾಗೂ ಡಾ. ಅಶ್ವತ್ಥ ನಾರಾಯಣ ಮನವಿ ಮಾಡಿದ್ದಾರೆ. ಆದರೆ, ಡಿಪಿಎಆರ್ ಮುನೇನಕೊಪ್ಪ ಅವರಿಗೆ ಈ ನಿವಾಸ ಹಂಚಿಕೆ ಮಾಡಿದೆ.
ಸಚಿವ ನಿರಾಣಿವಾಸವಿರುವ ಸ್ಯಾಂಕಿ ರಸ್ತೆಯಲ್ಲಿನ ನಂಬರ್ 31 ನಿವಾಸವನ್ನು ತಮಗೆ ನೀಡುವಂತೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಕೋರಿದ್ದಾರೆ. ನಿರಾಣಿಯವರು ಶೆಟ್ಟರ್ ಹಾಗೂ ಯೋಗೇಶ್ವರ್ ಇದ್ದ ಮನೆ ನೀಡುವಂತೆ ಮನವಿ ಮಾಡಿದ್ದರು. ಆ ಮನೆಗಳು ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಈಗಿರುವ ಮನೆಯಲ್ಲಿಯೇ ಮುಂದುವರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಬಿಎಸ್‌ವೈ ಸಿಎಂ ಆಗಿದ್ದಾಗ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಎಸ್.ಆರ್.ವಿಶ್ವನಾಥ್ ಹಾಗೂ ಎಂ.ಪಿ. ರೇಣುಕಾಚಾರ್ಯ ಅವರಿಗೆ ಸೆವೆನ್ ಮಿನಿಸ್ಟರ್ ಕ್ವಾಟರ್ಸ್‌ಗಳಲ್ಲಿ ಸರ್ಕಾರಿ ನಿವಾಸಗಳನ್ನು ಹಂಚಿಕೆ ಮಾಡಲಾಗಿತ್ತು. ಅವರು ಇನ್ನೂ ಆ ನಿವಾಸಗಳಲ್ಲೇ ಇರುವುದರಿಂದ, ಹಾಲಿ ಸಚಿವರಿಗೆ ಹಂಚಿಕೆ ಮಾಡಲಾಗಿಲ್ಲ ಎಂದು ತಿಳಿದು ಬಂದಿದೆ.
ಬಿಎಸ್‌ವೈಗೆ ಕಾವೇರಿ ಬಿಟ್ಟುಕೊಟ್ಟ ಅಶೋಕ
ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಕಾವೇರಿ ನಿವಾಸವನ್ನು ಹಂಚಿಕೆ ಮಾಡಲಾಗಿದೆ. ಈ ನಿವಾಸವನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಶೋಕ್ ಬಿಟ್ಟುಕೊಟ್ಟಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಅವಧಿ ಮುಗಿದ ಮೇಲೂ ಕಾವೇರಿಯಲ್ಲಿಯೇ ವಾಸವಿದ್ದರು. ಆಗ ಕೆ.ಜೆ. ಜಾರ್ಜ್‌ಗೆ ಕಾವೇರಿ ನಿವಾಸವನ್ನು ನೀಡಲಾಗಿತ್ತು. ಆಗ ಜಾರ್ಜ್ ಅವರು ಸಿದ್ದರಾಮಯ್ಯ ಅವರಿಗೆ ಕಾವೇರಿ ನಿವಾಸದಲ್ಲಿ ವಾಸ ಮಾಡಲು ಅವಕಾಶ ಕಲ್ಪಿಸಿದ್ದರು.
ಅದೃಷ್ಟದ ಮನೆ
ಯೋಗೇಶ್ವರ್ ವಾಸವಾಗಿರುವ ಕುಮಾರಕೃಪಾ ಬಳಿ ಇರುವ ಮನೆ ಅದೃಷ್ಟದ ಮನೆ ಎಂಬ ನಂಬಿಕೆ ಸಚಿವರಲ್ಲಿದೆ. ಹೀಗಾಗಿ ಆ ಮನೆಗಾಗಿ ಅನೇಕರು ಬೇಡಿಕೆ ಇಟ್ಟಿದ್ದಾರೆ. ಆದರೆ, ಯೋಗೇಶ್ವರ್ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದು,ಮತ್ತೆ ಸಂಪುಟ ಸೇರುತ್ತೇನೆ ಎಂಬವಿಶ್ವಾಸದಲ್ಲಿ ಮನೆ ಬಿಟ್ಟುಕೊಟ್ಟಿಲ್ಲ. ಹೀಗಾಗಿ, ಇನ್ನೂ ಒಂದು ತಿಂಗಳು ಅಲ್ಲೇ ವಾಸವಿರಲು ಅವಕಾಶ ನೀಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.