ಪ್ರೌಢಶಾಲಾ ಶಿಕ್ಷಕರಾದ ವೀರಪ್ಪ ಜಾವಳ್ಳಿ ಅವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯ ಗರಿ

Spread the love

ಮುಂಡಗೋಡ : ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಮುಂಡಗೋಡ ತಾಲೂಕಿನ ಅಂದಲಗಿ ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ವೀರಪ್ಪ ಜಾವಳ್ಳಿ ಪಡೆದುಕೊಂಡಿದ್ದಾರೆ.

ಕಿರು ಪರಿಚಯ :

ಯಾಲಕ್ಕಿ ಕಂಪಿನ ನಾಡು ಮತ್ತು ಸರ್ವಜ್ಞನ ನಾಡಿನಲ್ಲಿ ಶ್ರೀ ಹನುಮಂತಪ್ಪ ಮತ್ತು ಶ್ರೀಮತಿ ಹನುಮವ್ವ ಎಂಬ ಆದರ್ಶ ದಂಪತಿಗಳ ಮೂರನೆ ಪುತ್ರನಾಗಿ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಕುಗ್ರಾಮವಾದ ನಿಟ್ಟೂರಿನ ಅತ್ಯಂತ ಬಡಕುಟುಂಬದಲ್ಲಿ  ಜನಸಿದ ಇವರು ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಕುಗ್ರಾಮವಾದ ನಿಟ್ಟೂರಿನಲ್ಲಿ, ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಊರಿನಿಂದ ೫ ಕಿ ಮೀ ದೂರದ ಮಡ್ಲೂರಿನಲ್ಲಿ ಮತ್ತು ಪ್ರೌಢಶಿಕ್ಷಣವನ್ನು ಹಂಸಬಾವಿ ಯಲ್ಲಿ ಪೂರೈಸಿ ಮುಂದೆ ಕಾಲೇಜು ಶಿಕ್ಷಣವನ್ನು ಕುಮಾರೇಶ್ವರ ಪದವಿ ಪೂರ್ವ ಕಾಲೇಜು ರಟ್ಟಿಹಳ್ಳಿಯಲ್ಲಿ ಪೂರೈಸಿ ಮುಂದೆ ಇಂಟರ್‌ಸಿಪ್ ತರಬೇತಿಯನ್ನು ರಟ್ಟಿಹಳ್ಳಿಯಲ್ಲಿ ಮುಗಿಸಿ.ಪದವಿ ಶಿಕ್ಷಣವನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇಲ್ಲಿ ಬಾಹ್ಯವಿದ್ಯಾರ್ಥಿಯಾಗಿ ತೇರ್ಗಡೆ ಹೊಂದಿ ಮುಂದೆ B.Ed. ಪದವಿಯನ್ನು ಮಾನಸ ಗಂಗೋತ್ರಿ ಮೈಸೂರು ಇಲ್ಲಿ  ಮುಗಿಸಿದರು.ನಂತರ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇಲ್ಲಿ ಉನ್ನತ ಪದವಿಯನ್ನು ಕನ್ನಡ ವಿಷಯದಲ್ಲಿ ಪಡೆದಿದ್ದಾರೆ. ೦೯-೦೭-೧೯೮೫ರಂದು ಅಂದಿನ ಅವಿಭಜಿತ ಜಿಲ್ಲೆ ಉತ್ತರಕನ್ನಡದ ಮುಂಡಗೋಡ ತಾಲೂಕಿನ ಅತ್ಯಂತ ಹಿಂದುಳಿದ ಮತ್ತು ಇತರೆ ಜನ ಸಂಪರ್ಕದಿಂದ ದೂರ ಉಳಿದ  ಮೈನಳ್ಳಿಯಲ್ಲಿ ೧೯೮೫ ರಿಂದ ೧೯೯೪ ರವರೆಗೆ ಸುಮಾರು ೯ ವರ್ಷಗಳ ಕಾಲ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕಾರ್ಯನಿರ್ವಹಿಸಿ,ಪದೋನ್ನತಿ ಹೊಂದಿ ಮುಂಡಗೋಡ ನಗರದ ಹೆಸರಾಂತ ಸರಕಾರಿ ಹೆಣ್ಣು ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯರಾಗಿ ೧೯೯೪ ರಿಂದ ೨೦೦೪ ರವರೆಗೆ ಸುಮಾರ ೧೦ ವರ್ಷಗಳ ಕಾಲ ಜನ ಮೆಚ್ಚಿದ ಶಿಕ್ಷಕನಾಗಿ ಕಾರ್ಯವನ್ನು ನಿರ್ವಹಿಸಿ,೨೦೦೪ ರಿಂದ ೨೦೦೭ ರವರೆಗೆ ತಾಲೂಕು ಮಟ್ಟದ ಶಿಕ್ಷಣ ಇಲಾಖೆಯಾದ ಬಿ,ಆರ್,ಸಿಯಲ್ಲಿ ವಿವಿಧ ಅಧಿಕಾರಿಯಾಗಿ ಹಲವಾರು ಹಿರಿಯ ಹಾಗೂ ಅನುಭವಿ ಅಧಿಕಾರಿಗಳ ಕೆಳಗೆ ಕಾರ್ಯನಿರ್ವಹಿಸಿ,೨೦೦೭ರಲ್ಲಿ ಪದೋನ್ನತಿ ಹೊಂದಿ ಮುಂಡಗೋಡ ತಾಲ್ಲೂಕಿನ ಸರಕಾರಿ ಪ್ರೌಢಶಾಲೆ ಅಂದಲಗಿಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಹಾಗೂ ಹಲವಾರು ಹುದ್ದೆಗಳ ಪ್ರಭಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಮುಂಡಗೋಡ ತಾಲ್ಲೂಕಿನ ಹಿಂದುಳಿದ ಪ್ರದೇಶವಾದ ಅಂದಲಗಿಯಲ್ಲಿ ಅದೇ ತಾನೇ ಹೊಸದಾಗಿ ಪ್ರೌಢಶಾಲೆ ಪ್ರಾರಂಭವಾಗಿತ್ತು. ಯಾವೊಬ್ಬ ಶಿಕ್ಷಕರೂ ಇಲ್ಲದ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರ ಜವಾಬ್ದಾರಿಯ ಜೊತೆಗೆ ಇತರ ವಿಷಯಗಳ ಹೊಣೆಯನ್ನು ಹೊತ್ತುಕೊಂಡು ಮಕ್ಕಳನ್ನು ಶಾಲೆಗೆ ದಾಖಲಿಸಲು ಪಾಲಕರಿಗೆ ಪ್ರೋತ್ಸಾಹಿಸುತ್ತಾ, ಗ್ರಾಮೀಣ ಭಾಗದ ಮಕ್ಕಳಲ್ಲಿ ಕಲಿಕೆಯ ಬಗ್ಗೆ ಹೆಚ್ಚಿನ ಆಸಕ್ತಿ ಅಭಿರುಚಿ ಮೂಡಿಸಿ ಶಾಲೆಯ ಫಲಿತಾಂಶವನ್ನು ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕಿನ ಫಲಿತಾಂಶಕ್ಕಿಂತ ಹೆಚ್ಚಿನ ಫಲಿತಾಂಶ ನೀಡುತ್ತಾ ಬಂದಿದ್ದಾರೆ.

ಸಮೂಹದ ಸಹಕಾರದೊಂದಿಗೆ ಶಾಲೆಯಲ್ಲಿ ಹಾಗೂ ಗ್ರಾಮದಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸಿರುತ್ತಾರೆ. ಶಾಲಾ ಪ್ರಾರಂಭ ಹಂತದಿಂದಲೂ ಇಲ್ಲಿಯವರೆಗೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಕಾರಣೀಕರ್ತರಾಗಿದ್ದಾರೆ ಹಾಗೂ ಎರಡು ಬಾರಿ ಪ್ರಭಾರಿ ಮುಖ್ಯೋಪಾಧ್ಯಾರಾಗಿ ಶಾಲೆಯಲ್ಲಿ ಹಲವಾರು ಬದಲಾವಣೆ ಹಾಗೂ ಶಾಲೆಯ ಪ್ರಗತಿಯ ಬಗ್ಗೆ ಶ್ರಮಿಸಿದ್ದಾರೆ. ಅಷ್ಟೇ ಅಲ್ಲದೇ ಇಲಾಖೆಯವರು ಏರ್ಪಡಿಸಿದ ತರಬೇತಿ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದಾರೆ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಮಕ್ಕಳಿಗೆ ಉತ್ತೇಜಸಿದ್ದು ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಮಕ್ಕಳಿಗೆ ಉತ್ತೇಜಿಸಿದ್ದಾರೆ

ಭಾರತ ಸರ್ಕಾರ ಚುನಾವಣಾ ಆಯೋಗದಿಂದ ಆದೇಶಿಸಿದ ಲೋಕಸಭೆ ಮತ್ತು ವಿಧಾನಸಭೆ ಹಾಗೂ ಇನ್ನಿತರೇ ಚುನಾವಣೆ ಕರ್ತವ್ಯ ನಿರ್ವಹಿಸಿದ್ದಾರೆ ಎಸ್.ಎಸ್.ಎಲ್.ಸಿ ಪರೀಕಾ ಕೊಠಡಿಮೇಲ್ವಿಚಾರಕರಾಗಿ, ಪ್ರಶ್ನೆ ಪತ್ರಿಕೆಯ ಅಧೀಕ್ಷಕರಾಗಿ, ಸ್ಥಾನಿಕ ಜಾಗೃತ ದಳದ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

  ಒಟ್ಟಾರೆ ೧೯೮೫ ರಿಂದ ಇಲ್ಲಿಯವರೆಗೆ ಮುಂಡಗೋಡ ತಾಲೂಕನ್ನೇ ಕರ್ಮಭೂಮಿಯನ್ನಾಗಿಸಿಕೊಂಡಿದ್ದು ಶ್ರೀಯುತರು ದಿನಾಂಕ: ೧೫-೦೭-೨೦೨೨ ರಂದು ಸೇವಾ ನಿವೃತ್ತಿ ಹೊಂದುತ್ತಾರೆ. ಪ್ರಸ್ತುತ ಸಂದರ್ಭದಲ್ಲಿ ಶ್ರೀಯುತರಿಗೆ ಸಂದ ಈ ಪ್ರಶಸ್ತಿಯು ಅತ್ಯಂತ ಯೋಗ್ಯವಾಗಿದೆ ಎಂದು ಅಂದಲಗಿಯ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

                      ವಿಶೇಷ ಲೇಖನ : ಕುಮಾರ ತಡಕನಹಳ್ಳಿ

                          ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಅಂದಲಗಿ (ತಾಲೂಕ : ಮುಂಡಗೋಡ)

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದವರು :

ಮುಂಡಗೋಡ : ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಮುಂಡಗೋಡ ತಾಲೂಕಿನ ಗೋದ್ನಾಳ ಕಿ.ಪ್ರಾ.ಶಾಲೆಯ ಶಿಕ್ಷಕರಾದ ಲೋಕೇಶ ನಾಯ್ಕ ಪಡೆದುಕೊಂಡಿದ್ದಾರೆ.

ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಜಿಲ್ಲಾ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಮುಂಡಗೋಡ ತಾಲೂಕಿನ ಉಮ್ಮಚಗಿ ಹಿ.ಪ್ರಾ.ಶಾಲೆಯ ಶಿಕ್ಷಕಿ ಅನುಪಮಾ ಡಿ. ಪಡೆದುಕೊಂಡಿದ್ದಾರೆ.

ಅಭಿನಂದನೆ : ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ವೀರಪ್ಪ ಜಾವಳ್ಳಿ, ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಲೋಕೇಶ ನಾಯ್ಕ ಮತ್ತು ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಜಿಲ್ಲಾ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಅನುಪಮಾ ಡಿ. ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ನಡುವಿನಮನಿ ಅಭಿನಂದಿಸಿದ್ದಾರೆ.