
ಕಲಬುರಗಿ : ಕಲಬುರಗಿ ಮಹಾನಗರ ಪಾಲಿಕೆಯ 55 ವಾರ್ಡ್‌ಗಳಿಗೆ ನಡೆದ ಚುನಾವಣೆ ಫಲಿತಾಂಶ ಸೋಮವಾರ (ಸೆ.6)ರಂದು ಹೊರ ಬಂದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನಡೆದ ತೀವ್ರ ಪೈಪೋಟಿಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. 4 ಸ್ಥಾನ ಪಡೆದಿರುವ ಜೆಡಿಎಸ್ ಕಿಂಗ್ ಮೇಕರ್ ಆಗುವ ಸಾಧ್ಯತೆ ಹೆಚ್ಚಾಗಿದೆ.
ಕಲಬುರಗಿ ಮಹಾನಗರ ಪಾಲಿಕೆ ಮೇಲೆ ನಿಯಂತ್ರಣ ಸಾಧಿಸಲು ಬಿಜೆಪಿ ಪಕ್ಷ ಜೆಡಿಎಸ್ ಜೊತೆ ಕೈಜೋಡಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಸುಳಿವು ಬಿಟ್ಟು ಕೊಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ, “ಯಾವುದೇ ವಿವರವಾದ ಚರ್ಚೆ ಮಾಡಿಲ್ಲ, ನಾನು ಅವರಿಗೆ (ಎಚ್.ಡಿ. ಕುಮಾರಸ್ವಾಮಿ) ಒಟ್ಟಿಗೆ ಹೋಗೋಣ ಎಂದು ಹೇಳಿದ್ದೇನೆ. ಅವರು ಸ್ಥಳೀಯ ನಾಯಕರೊಂದಿಗೆ ಮಾತನಾಡಿ ನಂತರ ನಿರ್ಧರಿಸುತ್ತಾರೆ,” ಎಂದರು.
“ಜೆಡಿಎಸ್‌ನವರು ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಒಟ್ಟಾಗಿ ಕೆಲಸ ಮಾಡಲು ಆಸಕ್ತಿ ತೋರಿಸಿದ್ದಾರೆ ಮತ್ತು ಬಹುಮಟ್ಟಿಗೆ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಹುಮತವನ್ನು ರಚಿಸುತ್ತವೆ,” ಎಂದು ತಿಳಿಸಿದರು.
ಸಿಎಂ ಬೊಮ್ಮಾಯಿಯವರನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಭೇಟಿಯಾಗಿದ್ದರು. ಈ ಕುರಿತಂತೆ ಪ್ರಾದೇಶಿಕ ಪಕ್ಷದ ನಾಯಕರೊಂದಿಗೆ ನಡೆದ ಚರ್ಚೆಗಳಿಗೆ ಪ್ರತಿಕ್ರಿಯೆ ನೀಡಿದರು.
ಸೋಮವಾರ ಪ್ರಕಟವಾದ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಬಹುಮತ ಗಳಿಸಿದ್ದರೆ, ತಮ್ಮ ಭದ್ರಕೋಟೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಹುಮತದ ಗಡಿ ದಾಟಲು ಬಿಜೆಪಿ ವಿಫಲವಾಯಿತು ಮತ್ತು ಕಲಬುರಗಿಯಲ್ಲಿ ಎರಡನೇ ಸ್ಥಾನ ಗಳಿಸಿದೆ.
ಹುಬ್ಬಳ್ಳಿ- ಧಾರವಾಡದಲ್ಲಿ ಬಿಜೆಪಿಯು ಮ್ಯಾಜಿಕ್ ನಂಬರ್ 42ರ ಗಡಿಯನ್ನು ತಲುಪಲು ಕೇವಲ ಮೂರು ಸ್ಥಾನದ ಕೊರತೆಯಿದೆ. ಅಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬರುವ ಮುನ್ಸೂಚನೆ ಇದ್ದು, ಏಕೆಂದರೆ ಮೂವರು ಸ್ಥಳೀಯ ಶಾಸಕರು, ಇಬ್ಬರು ಎಂಎಲ್‌ಸಿಗಳು ಮತ್ತು ಒಂದು ಎಂಪಿ ಸ್ಥಾನವನ್ನು ಹೊಂದಿದೆ. 42ರ ಗಡಿ ದಾಟಲು ಸಹಾಯವಾಗುತ್ತದೆ.
ಇನ್ನು ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಹಿಡಿತ ಸಾಧಿಸಲು ಬಿಜೆಪಿ ಪಕ್ಷಕ್ಕೆ ಜೆಡಿಎಸ್ ಬೆಂಬಲ ಅಗತ್ಯವಾಗಿದೆ. ಕಲಬುರಗಿಯ 55 ವಾರ್ಡ್‌ಗಳಲ್ಲಿ 27 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದೇ ವೇಳೆ ಬಿಜೆಪಿ 23, ಜೆಡಿಎಸ್ ನಾಲ್ಕು ಗೆದ್ದಿದ್ದರೆ, ಒಬ್ಬ ಸ್ವತಂತ್ರ ಅಭ್ಯರ್ಥಿ ಜಯ ಗಳಿಸಿದ್ದಾನೆ.
ಜೆಡಿಎಸ್ ಶಾಸಕರ ನಿಯೋಗವು ತಮ್ಮ ನಾಯಕ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ತಾವು ಪ್ರತಿನಿಧಿಸುವ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಕುರಿತು ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿತ್ತು.