
ರಾಮನಗರ: ನಕಲಿ ಐಎಎಸ್ ಅಧಿಕಾರಿಯೊಬ್ಬ ಕಗ್ಗಲೀಪುರ ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ರವಿಶಂಕರ್ ಗುರೂಜಿ ಅವರ ಆಶ್ರಮಕ್ಕೂ ಭೇಟಿ ಕೊಟ್ಟಿದ್ದ ಈತ, ತಾನು ಐಎಎಸ್ ಅಧಿಕಾರಿಯೆಂದು ಪರಿಚಯ ಮಾಡಿಕೊಂಡಿದ್ದ. ಅಲ್ಲದೆ, ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಸಂಬಂಧಿಸಿದ ಜಮೀನು ವಿವಾದಕ್ಕೂ ಎಂಟ್ರಿಕೊಟ್ಟು, ಗುರೂಜಿ ಪರ ಬ್ಯಾಟಿಂಗ್ ಮಾಡಿದ್ದ.
ಮಹಾರಾಷ್ಟ್ರ ಮೂಲದ ಶಶೀರ್(24) ಬಂಧಿತ. ಕಳೆದ ಮೂರು ವರ್ಷದಿಂದ ಕಗ್ಗಲಿಪುರದಲ್ಲೇ ವಾಸವಾಗಿದ್ದ ಶಶೀರ್, ಓದಿರೋದು ಡಿಪ್ಲೊಮಾ. ಆದ್ರೆ, ತಾನು ಐಎಎಸ್ ಅಧಿಕಾರಿ, ಮಿನಿಸ್ಟರಿ ಆಫ್ ಹೋಮ್ ಅಫೈರ್ನಲ್ಲಿ ಅಧಿಕಾರಿಯಾಗಿದ್ದೇನೆ ಎಂದು ಬಿಂಬಿಸಿಕೊಂಡಿದ್ದ. ಸ್ಥಳೀಯ ಪೊಲೀಸರ ಬಳಿಯೂ ತಾನು ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದ.
ಬೆಂಗಳೂರು ಹೊರವಲಯದಲ್ಲಿರುವ ರವಿಶಂಕರ್ ಗುರೂಜಿ ಆಶ್ರಮಕ್ಕೂ ಭೇಟಿ ಕೊಟ್ಟಿದ್ದ ಶಶೀರ್, ಐಎಎಸ್ ಅಧಿಕಾರಿಯೆಂದು ಪರಿಚಯ ಮಾಡಿಕೊಂಡಿದ್ದ. ರವಿಶಂಕರ್ ಗುರೂಜಿ ಆಶ್ರಮದ ಜಮೀನು ವಿವಾದದ ವಿಚಾರಕ್ಕೂ ಎಂಟ್ರಿ ಕೊಟ್ಟಿದ್ದ ಶಶೀರ್, ನಿಮ್ಮ ಜಮೀನು ವಿವಾದವನ್ನ ಬಗೆಹರಿಸಿಕೊಡುವುದಾಗಿ ಹೇಳಿದ್ದ. ಶಶೀರ್ನ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು ವಿಚಾರ ಮಾಡಿದಾಗ ಅಸಲಿಯತ್ತು ಬಯಲಾಗಿದೆ. ಮಂಗಳವಾರ ರಾತ್ರಿ ನಕಲಿ ಐಎಎಸ್ ಅಧಿಕಾರಿಯನ್ನ ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.