
ಬೆಂಗಳೂರು: ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರು ಕಡೆ ಪಕ್ಷ ನಿಗಮ ಮಂಡಳಿಯ ಪ್ರಭಾವಿ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿರುವ ಬಿಜೆಪಿ ಗೌರಿ-ಗಣೇಶ ಹಬ್ಬ ಇಲ್ಲವೇ ಅಧಿವೇಶನ ಬಳಿಕ ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಸಂಭವವಿದೆ.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಸುಮಾರು 40 ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಈ ಹಂತದಲ್ಲಿ ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಿ ಬಿಎಸ್‍ವೈ ತಮ್ಮ ಬೆಂಬಲಿಗರಿಗೆ ಮಣೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ರಾಜೀನಾಮೆ ಕೊಟ್ಟು ಇದೀಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಪಕ್ಷದ ನಿಷ್ಟರಿಗೆ ನಿಗಮ ಮಂಡಳಿಯಲ್ಲಿ ಸ್ಥಾನಮಾನ ಕಲ್ಪಿಸಬೇಕೆಂದು ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ.
ನವದೆಹಲಿಗೆ ತೆರಳುತ್ತಿರುವ ಬಸವರಾಜ ಬೊಮ್ಮಾಯಿ ಅವರು ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಸಂಬಂಧ ಚರ್ಚೆ ನಡೆಸಲಿದ್ದಾರೆ.ಯಾವುದಾದರೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ದಕ್ಕಿಸಿಕೊಳ್ಳಲು ಆಕಾಂಕ್ಷಿಗಳು ತಮ್ಮ ತಮ್ಮ ಗಾಡ್‍ಫಾದರ್‍ಗಳ ಮೂಲಕ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ.
ಇದರ ನಡುವೆ ಆಕಾಂಕ್ಷಿಗಳು ಸ್ಥಳೀಯ ಸಂಸದರು, ಸಚಿವರು, ಬಿಜೆಪಿ ಜಿಲ್ಲಾ ಧ್ಯಕ್ಷರ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಹೆಸರು ಶಿಫಾರಸ್ಸಿಗೆ ಒತ್ತಡ ಹಾಕುತ್ತಿದ್ದಾರೆ.ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿರುವ ಶಾಸಕರನ್ನು ನಿಗಮ-ಮಂಡಳಿ ಅಧ್ಯಕ್ಷರನ್ನಾಗಿಸಿ ಸಮಾಧಾನಪಡಿಸುವ ತಂತ್ರಕ್ಕೆ ಹೈಕಮಾಂಡ್ ಮುಂದಾಗಿದೆ.
ಇದರ ನಡುವೆ ಗೌರಿ-ಗಣೇಶ ಹಬ್ಬ ಹಾಗೂ ಅಧಿವೇಶನ ಮುಗಿದ ಬಳಿಕವೇ ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡಲು ಸಿಎಂ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ.ಅಧಿವೇಶನಕ್ಕೂ ಮುನ್ನವೇ ನೇಮಿಸಿದರೆ ಸ್ಥಾನ ಸಿಗದವರು ಮುನಿಸಿಕೊಳ್ಳಬಹುದು. ಸದನದಲ್ಲಿ ಪ್ರತಿಪಕ್ಷವನ್ನು ಸಮರ್ಥವಾಗಿ ಎದುರಿಸಲು ಸದಸ್ಯರ ಹಾಜರಿ ಅಗತ್ಯವಾಗಿರುವುದರಿಂದ ಸದ್ಯಕ್ಕೆ ಸಿಎಂ ಅಂತಹ ದುಸ್ಸಾಹಸಕ್ಕೆ ಕೈ ಹಾಕಲಾರರು ಎನ್ನಲಾಗುತ್ತಿದೆ.
ಪಾಲಿಗೆ ಬಂದಿದ್ದೇ ಪಂಚಾಮೃತ ಎನ್ನುವಂತೆ ಶಾಸಕರು ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುತ್ತಾರೆಯೇ ಎಂಬುದು ಚರ್ಚೆಯ ವಿಷಯವಾಗಿದೆ. ಪಾಲಿಕೆ ಚುನಾವಣೆ ವೇಳೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪಕ್ಷದ ಹಿರಿಯ ಮುಖಂಡರು ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.
ಪಕ್ಷದ ಸಂಘಟನೆ ಹಿತದೃಷ್ಟಿಯಿಂದ ಮಾಜಿ ಶಾಸಕರು, ಮುಖಂಡರನ್ನು ಪರಿಗಣಿಸಬೇಕೆಂಬ ಕೂಗು ಕೇಳಿಬಂದಿದೆ. ಕೆಲವು ಮುಖಂಡರು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಸೇರಿದಂತೆ ಮತ್ತಿತರರನ್ನು ಭೇಟಿಯಾಗಿ ಮನವಿ ಸಹ ಸಲ್ಲಿಸಿದ್ದಾರೆ. ಆದರೆ, ಯಾವುದೂ ಕೂಡ ಈವರೆಗೂ ಖಾತ್ರಿಯಾಗಿಲ್ಲ.