ನವದೆಹಲಿ: ಇತ್ತೀಚೆಗೆ ಕಾಶ್ಮೀರದಲ್ಲಿ ನಾಗರಿಕ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಏಕಕಾಲದಲ್ಲಿ ದೆಹಲಿ, ಉತ್ತರ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದ 18 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಗಾಲ್ಬಾಗ್ ಕಾಕಪೋರಾ ನಿವಾಸಿ ಅಬ್ ಖಾಲಿಕ್ ದಾರ್ ಪುತ್ರ ಓವೈಸ್ ಅಹ್ಮದ್ ದಾರ್ ಮನೆ ಮೇಲೆಯೂ ದಾಳಿ ನಡೆದಿದೆ. ಉಗ್ರರ ಸಂಘಟನೆಗಳಿಗೆ ಇರುವ ಭೂಗತ ಜಾಲಗಳನ್ನು ಪತ್ತೆಹಚ್ಚಲು ಎನ್ಐಎ ಈ ದಾಳಿ ನಡೆಸಿದೆ.
ಲಷ್ಕರ್ ಇ ತೊಯ್ಬಾ, ಜೈಷ್ ಇ ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್, ಅಲ್ ಬದ್ರ್ ಮತ್ತು ಇರತೆ ಉಗ್ರ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರದಿಂದಾಚೆಗೆ ಹರಡಿಕೊಂಡಿದ್ದು, ಅವರ ಹೆಡೆಮುರಿಕಟ್ಟಲು ಅವರಿಗೆ ಸಂಪರ್ಕ ಇರುವ ಶಂಕಿತರ ಮೇಲೆ ಎನ್ಐಎ ದಾಳಿ ಮಾಡಿದೆ.
ನಿನ್ನೆ (ಅ.11) ಉಗ್ರನೊಬ್ಬನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿತ್ತು. ಮೃತ ಉಗ್ರನನ್ನು ಇಮ್ತಿಯಾಜ್ ಅಹ್ಮರ್ ದಾರ್ ಎಂದು ಗುರುತಿಸಲಾಗಿದೆ. ಈತ ಲಷ್ಕರ್ ಇ ತೊಯ್ಬಾ ಸಂಘಟನೆ ಜತೆ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಇದೆ. ಅಲ್ಲದೆ, ಬಂಡಿಪೋರಾದ ಶಹಗುಂದ್ನಲ್ಲಿ ನಡೆದ ನಾಗರಿಕರ ಹತ್ಯೆಯಲ್ಲಿ ಈತನ ಕೈವಾಡ ಇರುವುದು ದೃಢವಾಗಿದೆ.