ಶಾರುಕ್‌ ಮಗ ಅಬ್‌ರಾಮ್‌ ವಿಡಿಯೋ ಭಿತ್ತರಿಸಿದ ಟಿವಿ ಮಾಧ್ಯಮಕ್ಕೆ ನೆಟ್ಟಿಗರಿಂದ ತರಾಟೆ

Spread the love

ನವದೆಹಲಿ : ಡ್ರಗ್ಸ್‌ ಸೇವನೆ ಕೇಸ್‌ ನಲ್ಲಿ ಆರೋಪಿಯಾಗಿ ಎನ್‌ಸಿಬಿ ಅಧಿಕಾರಿಗಳಿಂದ ಬಂಧನಕ್ಕೆ ಗುರಿಯಾಗಿರುವ ಬಾಲಿವುಡ್‌ ಕಿಂಗ್‌ ‘ಶಾರುಖ್‌ ಖಾನ್‌’ ಅವರ ಪುತ್ರ ಆರ್ಯನ್‌ ಖಾನ್‌ ಜಾಮೀನು ಅರ್ಜಿ ವಿಚಾರಣೆ ಸೋಮವಾರ ನಗರದ ವಿಶೇಷ ನ್ಯಾಯಾಲಯದಲ್ಲಿ ನಡೆದಿತ್ತು.

ಆ ವೇಳೆ ಕೋರ್ಟ್‌ ಸಂಕೀರ್ಣಕ್ಕೆ ಕಾರೊಂದು ಬಂತು. ಎಲ್ಲ ಟಿವಿ ಮಾಧ್ಯಮದವರು ಆ ಕಾರಿನ ಮೇಲೆ ಕ್ಯಾಮೆರಾ ಫೋಕಸ್‌ ಮಾಡಿ ಮುಗಿಬಿದ್ದರು. ಕಾರಿನಿಂದ ಪುಟ್ಟ ಬಾಲಕ ಸರ್ರನೆ ಕೆಳಗಿಳಿದು, ಕೋರ್ಟ್‌ ಆವರಣದ ಒಳಕ್ಕೆ ಓಡಿದ. ಆತ ಶಾರುಖ್‌ ಖಾನ್‌ ಕೊನೆಯ ಪುತ್ರ, ಬಾಲಕ ಅಬ್‌ರಾಮ್‌ ಎಂದು ತಿಳಿದಕೂಡಲೇ ಮಾಧ್ಯಮಗಳು ವಿಡಿಯೋವನ್ನು ಪುನಃ ಪುನಃ ಬಿತ್ತರಿಸಿ ದೊಡ್ಡ ಸುದ್ದಿ ಮಾಡುತ್ತಲೇ ಹೋದರು.

ಇದನ್ನು ಹಲವು ಮಾಧ್ಯಮಗಳು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲೂ ಹಾಕಿಕೊಂಡವು. ಕೂಡಲೇ ನೆಟ್ಟಿಗರು ಮಾಧ್ಯಮಗಳಿಗೆ ತರಾಟೆಗೆ ತೆಗೆದುಕೊಂಡರು.

ಪುಟ್ಟ ಬಾಲಕ ಆತನ ಅಣ್ಣನನ್ನು ಕಾಣಲು ಬಂದರೆ ಏನು ತಪ್ಪು ? ಯಾಕೆ ನರಭಕ್ಷಕರಂತೆ ಆರೋಪಿಗಳ ಬೆನ್ನ ಹಿಂದೆ ಬಿದ್ದು, ಅವರ ಕುಟುಂಬಸ್ಥರನ್ನು ಮಾನಸಿಕ ನರಳಾಟಕ್ಕೆ ನೂಕುತ್ತೀರಿ. ಕನಿಷ್ಠ ಆ ಬಾಲಕನನ್ನು ಬಿಟ್ಟುಬಿಡಿ. ಮಗುವಿನ ಮುಗ್ಧ ಪ್ರಪಂಚ ಸುಂದರವಾಗಿರಲಿ ಎಂದು ಅನೇಕರು ಟ್ವೀಟ್‌ ಮಾಡಿ, ಫೇಸ್‌ಬುಕ್‌ ಪೋಸ್ಟ್‌ಗಳನ್ನು ಹಾಕಿದ್ದಾರೆ.

ಇದೇ ಮೊದಲ ಬಾರಿಗೆ ಶಾರುಕ್‌ ಕುಟುಂಬದ ಒಬ್ಬ ಸದಸ್ಯ ಮಾಧ್ಯಮದ ಎದುರು ಕಾಣಿಸಿಕೊಂಡಿದ್ದಾರೆ. ಮಾಧ್ಯಮಗಳ ವಿಚಿತ್ರ ಪ್ರಶ್ನೆಗಳು, ಸ್ವಘೋಷಿತ ತೀರ್ಮಾನಗಳನ್ನು ಎದುರಿಸಿ ಮುಜುಗರಕ್ಕೆ ಈಡಾಗುವುದನ್ನು ತಪ್ಪಿಸಲು ಶಾರುಕ್‌ ಮತ್ತು ಅವರ ಪತ್ನಿ ಗೌರಿ ಖಾನ್‌ ಇಬ್ಬರೂ ಬಾಂದ್ರಾದ ಮನೆಯಿಂದ ಹೊರಬಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಬಹಿರಂಗ ಹೇಳಿಕೆಗಳನ್ನು ಕೂಡ ಕೊಟ್ಟಿಲ್ಲ.