
ಮುಂಡಗೋಡ : ಶಿವರಾಮ್ ಹೆಬ್ಬಾರ ಸೇರಿ ಹದಿನೈದು ಜನ ಶಾಸಕರು ಬಿಜೆಪಿಗೆ ಬಂದು ಸರ್ಕಾರ ರಚಿಸಲು ಕಾರಣವಾಗಿದ್ದರಿಂದಲೇ ಮುಂಡಗೋಡಿನಲ್ಲಿ ದೊಡ್ಡ ಮಟ್ಟದ ಅಭಿವೃದ್ದಿ ಕಾಮಗಾರಿಗಳನ್ನ ಮಾಡಲು ಕಾರಣವಾಯಿತು ಎಂದುಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಮುಂಡಗೋಡ ಪಟ್ಟಣದ ಟೌನ್ ಹಾಲ್ ನಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ 34.30 ಕೋಟಿರೂ. ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಶಿವರಾಮ್ ಹೆಬ್ಬಾರ್ ಸೇರಿ ಹದಿನೈದು ಜನರು ಹಣ ತೆಗೆದುಕೊಂಡು ಬಿಜೆಪಿಗೆ ಬಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಒಂದೇ ಒಂದು ರೂಪಾಯಿ ಹಣ ತೆಗೆದುಕೊಳ್ಳದೇ ಅವರು ಪಕ್ಷಕ್ಕೆ ಬಂದು ಸರ್ಕಾರ ರಚಿಸಲು ಕಾರಣವಾದರು ಎಂದರು.
ಶಿವರಾಮ್ ಹೆಬ್ಬಾರ್ ಮೇಲೆ ವಿಶ್ವಾಸವಿಟ್ಟು ಉಪಚುನಾವಣೆಯಲ್ಲಿ ಕ್ಷೇತ್ರದ ಜನರು ಮರು ಆಯ್ಕೆ ಮಾಡಿದ್ದೀರಿ. ಅದರಂತೆ ಅವರು ಸಹ ಜನರ ನಂಬಿಕೆಯನ್ನ ಹುಸಿ ಮಾಡದೇ ಕಾರ್ಯವನ್ನ ಮಾಡುತ್ತಿದ್ದಾರೆ. ಕ್ಷೇತ್ರಕ್ಕೆ ಕೋಟಿಗಟ್ಟಲೇ ಹಣವನ್ನು ಅಭಿವೃದ್ದಿಗಾಗಿ ತಂದಿದ್ದಾರೆ. ಅತಿವೃಷ್ಟಿಗಾಗಿ 32 ಕೋಟಿ ಹಣವನ್ನು ಕ್ಷೇತ್ರಕ್ಕೆ ತಂದಂತಹ ರಾಜ್ಯದ ಮೊದಲ ಶಾಸಕ ಶಿವರಾಮ್ ಹೆಬ್ಬಾರ್ ಆಗಿದ್ದಾರೆ. ಅವರು ಬಿಜೆಪಿಗೆ ಬಂದಿದ್ದರಿಂದ ಪಕ್ಷಕ್ಕೆ ಹೆಚ್ಚು ಶಕ್ತಿ ಬಂದಿದ್ದು ರಾಜ್ಯದ ಅಭಿವೃದ್ದಿಗೂ ಇದು ಸಹಕಾರ ವಾಗಿದೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಲವು ಸವಾಲುಗಳನ್ನ ಎದುರಿಸಿದೆ. ಅತಿವೃಷ್ಟಿ, ಕೋವಿಡ್ ನಿಂದ ಸಾಕಷ್ಟು ಹಾನಿಯಾಯಿತು. ರಾಜ್ಯದ ಬೊಕ್ಕಸಕ್ಕೆ ಲಾಕ್ ಡೌನ್ ನಿಂದ ಹಣ ಬರದಂತಾಯಿತು. ನಂತರ ಸಿಎಂ ಆಗಿದ್ದ ಯಡಿಯೂರಪ್ಪನವರು ರಾಜ್ಯ ಪ್ರವಾಸ ಮಾಡಿ ಎಲ್ಲವನ್ನೂ ಎದುರಿಸಿದ್ದಾರೆ. ರಾಜ್ಯಕ್ಕೆ ಸದ್ಯ ಸಂಪನ್ಮೂಲ ಹರಿದು ಬರುತ್ತಿದ್ದು ಅಭಿವೃದ್ದಿ ಕೆಲಸವನ್ನ ಇನ್ನೂ ಹೆಚ್ಚಾಗಿ ಮಾಡುತ್ತೇವೆ ಎಂದರು.
ಮತದಾರರ ಋಣವನ್ನು ಈಡೇರಿಸುವ ರಾಜಕಾರಣಿ ರಾಜಕೀಯ ಕ್ಷೇತ್ರದಲ್ಲಿ ಉಳಿಯುತ್ತಾನೆ. ಅದರಂತೆ ಹೆಬ್ಬಾರ್ ಕ್ಷೇತ್ರದಲ್ಲಿ ಗಟ್ಟಿಯಾಗಿದ್ದಾರೆ. ಕಾರ್ಮಿಕ ಇಲಾಖೆ ಸಚಿವರಾದರವರಿಗೆ ಆ ಇಲಾಖೆಯ ಬಗ್ಗೆಯೇ ಕೆಲವರಿಗೆ ಗೊತ್ತಿರುವುದಿಲ್ಲ. ಕಾರ್ಮಿಕ ಸಚಿವರಾದ ನಂತರ ಹೆಬ್ಬಾರ್ ಹಲವು ಕೆಲಸವನ್ನು ತಮ್ಮ ಇಲಾಖೆಯಲ್ಲಿ ಮಾಡಿ ಗಮನ ಸೆಳೆದಿದ್ದಾರೆ. ರಾಜ್ಯದಲ್ಲಿ ಸಿಎಂ ನಂತರ ಹೆಚ್ಚಿನ ಪ್ರಖ್ಯಾತಿ ಪಡೆದ ಇಲಾಖೆ ಸಚಿವರು ಶಿವರಾಮ್ ಹೆಬ್ಬಾರ್ ಆಗಿದ್ದಾರೆ ಎಂದು ಸಚಿವರಾದ ಸಿ.ಸಿ.ಪಾಟೀಲ್ ಹೇಳಿದರು.

ಬಹಳ ವರ್ಷದಿಂದ ಅಧಿಕಾರ ನಡೆಸಿದವರು ಅಭಿವೃದ್ದಿ ಮಾಡಲಿಲ್ಲ : ಸಚಿವ ಹೆಬ್ಬಾರ್
ಶಿಡ್ಲಗುಂಡಿಯಿಂದ ಮಂಡಗೋಡಿಗೆ ಹೋಗುವ ರಸ್ತೆ ಕಾಮಗಾರಿಯನ್ನು ಸರಿಪಡಿಸುವಂತೆ ಹಲವು ವರ್ಷದ ಬೇಡಿಕೆಯಿತ್ತು. ಜಿಲ್ಲೆಯನ್ನ ಬಹಳ ವರ್ಷದಿಂದ ಆಳಿದವರು, ಬೇಕಾದಷ್ಟು ಅಧಿಕಾರ ಕೈನಲ್ಲಿ ಇಟ್ಟುಕೊಂಡವರು ಇದನ್ನ ಸರಿಪಡಿಸಲಿಲ್ಲ. ಆದರೆ ನಮ್ಮ ಅವಧಿಯಲ್ಲಿ ಈ ಕಾಮಗಾರಿಗೆ ಚಾಲನೆ ಸಿಕ್ಕಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಶಿಡ್ಲಗುಂಡಿಯಿಂದ ಮುಂಡಗೋಡಿಗೆ ಸುಮಾರು 22.50 ಕೋಟಿರೂ. ವೆಚ್ಚದಲ್ಲಿ ನೂತನ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದು ಶೀಘ್ರದಲ್ಲೇ ಕಾಮಗಾರಿ ಮುಕ್ತಾಯವಾಗಲಿದ್ದು ಜನರಿಗೆ ಇದರಿಂದ ಸಾಕಷ್ಟು ಉಪಯೋಗವಾಗಲಿದೆ ಎಂದರು.
ಕ್ಷೇತ್ರಕ್ಕೆ ನಾನು ಸಚಿವನಾದ ನಂತರ ರಸ್ತೆ ಕಾಮಗಾರಿಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣ ಬಂದಿದೆ. 119 ಕಾಲು ಸಂಕಗಳನ್ನ ಕ್ಷೇತ್ರಕ್ಕೆ ಲೋಕೋಪಯೋಗಿ ಇಲಾಖೆಯಿಂದ ನೀಡಲಾಗಿದೆ. ಗುಳ್ಳಾಪುರ ಸೇತುವೆ ಕುಸಿದಾಗ ಸ್ವತಃ ಸಚಿವರಾದ ಸಿ.ಸಿ.ಪಾಟೀಲ್ ನೋಡಿ ಸೇತುವೆ ನಿರ್ಮಾಣಕ್ಕೆ ಹಣ ನೀಡಿದ್ದಾರೆ. ಇದರಿಂದ ಯಲ್ಲಾಪುರ ಕ್ಷೇತ್ರದಲ್ಲಿ ಅಭಿವೃದ್ದಿ ಹೆಚ್ಚಾಗಲು ಕಾರಣವಾಗಿದೆ ಎಂದರು.
ಸರ್ಕಾರದ ಮೇಲೆ ಕೆಲವರು 40 ಪರ್ಸಂಟೆಜ್ ಆರೋಪ ಮಾಡುವವರು, ಯಾವುದೇ ಒಂದು ದಾಖಲೆಯನ್ನ ನೀಡಲಿ. ಕೇವಲ ರಾಜಕೀಯ ಕಾರಣಕ್ಕಾಗಿ, ಆರೋಪ ಮಾಡಬಾರದು. ಅವರ ಎಲ್ಲಾ ಸವಾಲುಗಳನ್ನ ಸ್ವೀಕರಿಸಲು ಬಿಜೆಪಿ ಸಿದ್ದವಿದೆ. ಎಲ್ಲಿಯ ವರೆಗೆ ಬಡವರ ಪರ ಕೆಲಸ ಮಾಡುತ್ತೇವೋ ಅಲ್ಲಿಯ ವರೆಗೆ ಜನರ ಆಶಿರ್ವಾದ ಪಡೆಯಲು ಸಾಧ್ಯ ಎಂದರು.